ದಕ್ಷಿಣ ಕನ್ನಡ: ಡಾಂಬರ್ನಲ್ಲಿ ಸಿಲುಕಿದ ನಾಗರಹಾವೊಂದನ್ನು ಪುತ್ತೂರಿನ ಉರಗಪ್ರೇಮಿ ತೇಜಸ್ ಬನ್ನೂರು ರಕ್ಷಿಸಿ ಹಾವಿಗೆ ಜೀವದಾನ ಮಾಡಿದ್ದಾರೆ. ಡಾಂಬರ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವನ್ನು ಎರಡು ದಿನಗಳ ಕಠಿಣ ಪರಿಶ್ರಮದೊಂದಿಗೆ ತೇಜಸ್ ರಕ್ಷಿಸಿದ್ದು, ತಾನು ಹಾವನ್ನು ರಕ್ಷಿಸುವ ಕಾರ್ಯಾಚರಣೆಯ ವಿಡಿಯೋವನ್ನು ತಮ್ಮ ಗೆಳೆಯರೊಂದಿಗೂ ಹಂಚಿಕೊಂಡಿದ್ದಾರೆ. ತೇಜಸ್ ಈ ಕಾರ್ಯಕ್ಕೆ ಸಾಮಾಜಿಕ ತಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉರಿ ಬಿಸಿಲಿನಲ್ಲಿ ಡಾಂಬರ್ ರಸ್ತೆಯಲ್ಲಿ ಸಿಲುಕಿ ಹಾವು ಹಾಗೂ ಇತರ ಸಣ್ಣ ಪ್ರಾಣಿಗಳು ಒದ್ದಾಡುವುದು ಸಾಮಾನ್ಯವಾಗಿದ್ದು, ಇಂಥ ಸಮಯದಲ್ಲಿ ಅವುಗಳನ್ನು ರಕ್ಷಿಸಲು ಹೋಗುವವರ ಸಂಖ್ಯೆ ಕಡಿಮೆ. ಅದರಲ್ಲೂ ವಿಷಜಂತುಗಳನ್ನು ಕಂಡರೆ ಅದರ ನೆರವಿಗೆ ಹೋಗುವವರಿಗಿಂತ ದೂರಸರಿಯುವವರೇ ಹೆಚ್ಚು. ಆದರೆ ತೇಜಸ್ ಬನ್ನೂರು ಇಂತಹ ಹಲವು ಕಾರ್ಯಗಳನ್ನು ಮಾಡಿದ್ದು, ಅದರಲ್ಲೂ ಹಾವುಗಳನ್ನು ರಕ್ಷಿಸಿ ಅವುಗಳಿಗೆ ಜೀವದಾನವನ್ನು ಮಾಡಿರುವ ಹಲವು ಉದಾಹರಣೆಗಳಿವೆ.
ಅದೇ ರೀತಿಯ ಒಂದು ಕಾರ್ಯಾಚರಣೆಯನ್ನು ತೇಜಸ್ ಬನ್ನೂರು ಪುತ್ತೂರಿನ ನೆಹರೂನಗರದಲ್ಲಿ ಮಾಡಿದ್ದಾರೆ. ನಗರದ ಮನೆಯೊಂದರಲ್ಲಿ ಡಾಂಬರ್ ಡಬ್ಬಿಗಳನ್ನು ಶೇಖರಿಸಿಟ್ಟ ಪ್ರದೇಶದಲ್ಲಿ ನಾಗರಹಾವು ಪತ್ತೆಯಾಗಿತ್ತು. ಹಾವೊಂದು ಡಾಂಬರ್ ಡಬ್ಬಿಗಳ ಅಂಚಿನಲ್ಲಿ ಹೋಗಿರುವುದನ್ನು ಗಮನಿಸಿದ್ದ ಮನೆ ಮಂದಿ ತೇಜಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ, ತೇಜಸ್ ಅಲ್ಲಿಗೆ ಬರುವ ಮೊದಲೇ ಆ ಹಾವು ಅಲ್ಲಿಂದ ತಪ್ಪಿಸಿ ಬೇರೆ ಕಡೆಗೆ ಹೋಗಿತ್ತು.
ಡಾಂಬರ್ ಡಬ್ಬಿಗಳನ್ನು ಪರಿಶೀಲನೆ ನಡೆಸುವ ಸಂದರ್ಭ ಡಬ್ಬದಿಂದ ನೆಲಕ್ಕೆ ಹರಿದಿದ್ದ ಡಾಂಬರ್ನಲ್ಲಿ ಮತ್ತೊಂದು ಹಾವು ಬಿದ್ದಿರುವುದು ತೇಜಸ್ ಗಮನಕ್ಕೆ ಬಂದಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ತೇಜಸ್ ಹಾವನ್ನು ತನ್ನ ಬೇರೊಂದು ಕಡೆಗೆ ವರ್ಗಾಯಿಸಿ ಅಲ್ಲಿ ಹಾವಿನ ಚರ್ಮದಿಂದ ಡಾಂಬರ್ ಅನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ. ನಾಗರಹಾವಿನ ಚರ್ಮದಿಂದ ಡಾಂಬರ್ ತೆಗೆಯಲು ಎರಡು ದಿನಗಳ ಕಾಲ ಶ್ರಮಪಟ್ಟಿದ್ದಾರೆ.
ನಾಗರಹಾವನ್ನು ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಒಂದು ದಿನ ಸಂಪೂರ್ಣ ಅದ್ದಿ ಇಟ್ಟು ಬಳಿಕ ಅದರ ಮೇಲಿಂದ ಡಾಂಬರ್ನ್ನು ಬೇರ್ಪಡಿಸಿದ್ದಾರೆ. ಸುಮಾರು ಒಂದು ವರ್ಷ ಪ್ರಾಯದ ನಾಗರಹಾವು ಚೇತರಿಸಿಕೊಂಡ ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯವನ್ನೂ ತೇಜಸ್ ಮಾಡಿದ್ದಾರೆ.
ತೇಜಸ್ ಪ್ರಕಾರ ಡಾಂಬರ್ನಲ್ಲಿ ಸಿಕ್ಕಿಹಾಕಿಕೊಂಡ ಹಾವಿನ ಚರ್ಮಕ್ಕೆ ಕೊಂಚ ಹಾನಿಯಾಗಿದ್ದರೂ, ಹೊಸ ಚರ್ಮ ಬರಲಿದೆ. ಇದರಿಂದಾಗಿ ಈಗಿರುವ ಚರ್ಮ ಕಳಚಿ ಹೋಗಲಿದೆ. ಇದರಿಂದಾಗಿ ಹಾವಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಹಾವಿನ ಎಲ್ಲ ಚಲನವಲನಗಳನ್ನು ಪರೀಕ್ಷಿಸಿದ ಬಳಿಕವೇ ಹಾವನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ. ತೇಜಸ್ ಬನ್ನೂರು ಈವರೆಗೆ ಇಂತಹ ಹಲವು ರೀತಿಯ ಕಾರ್ಯಾಚರಣೆಗಳ ಮೂಲಕ ಮೂಕ ಪ್ರಾಣಿಗಳನ್ನು ರಕ್ಷಿಸಿದ್ದು, ಅದರಲ್ಲೂ ಹಾವುಗಳನ್ನು ರಕ್ಷಿಸಿ ಸಂರಕ್ಷಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕೊರೊನಾ ಸೋಂಕು: ಮೊದಲ ಪ್ರಕರಣ ಪತ್ತೆ