ಬೆಳ್ತಂಗಡಿ : ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ಬೆಂಗಳೂರು ಸಿಐಡಿ ಪೊಲೀಸ್ ಅರಣ್ಯ ಘಟಕದ (FMS) ತಂಡವು 125 ಕೆಜಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರಕ್ತ ಚಂದನ ವಶಕ್ಕೆ ಪಡೆದುಕೊಂಡು, ವೇಣೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ.
ಆರೋಪಿಗಳಾದ ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ನಿವಾಸಿ ಖಾಲಿದ್, ಗುರುವಾಯನಕೆರೆ ನಿವಾಸಿ ದೀಕ್ಷಿತ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಸಂತೋಷ್ ತಲೆಮರೆಸಿಕೊಂಡಿದ್ದಾನೆ.
ಬೆಳ್ತಂಗಡಿ ತಾಲೂಕಿನ ವೇಣೂರು ವ್ಯಾಪ್ತಿಯ ಕರಿಮಣೇಲು ಎಂಬಲ್ಲಿಂದ ರಕ್ತಚಂದನ ಸಾಗಾಟ ನಡೆಸಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಸಬ್ಇನ್ಸ್ಪೆಕ್ಟರ್ ಜಾನಕಿ ನೇತೃತ್ವದಲ್ಲಿ ಸಿಬ್ಬಂದಿ, ಆರೋಪಿಗಳಸಹಿತ ಮಾಲು ಹಾಗು ಸಾಗಾಟಕ್ಕೆ ಬಳಸಿದ ವಾಹನ ಜಪ್ತಿ ಮಾಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ವೇಣೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಇಬ್ಬರು ಪೊಲೀಸರ ವಿರುದ್ಧ ಎಫ್‌ಐಆರ್: ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಸ್ಮಗ್ಲಿಂಗ್ ಮಾಡಿರುವ ಆರೋಪದಡಿ ಸಿಕ್ಕಿಬಿದ್ದ ಘಟನೆ (ಜನವರಿ 10-2022)ರಂದು ಬೆಳಕಿಗೆ ಬಂದಿತ್ತು. ರಕ್ತಚಂದನ ತುಂಡುಗಳನ್ನು ಮಾರಾಟ ಮಾಡಿ ಸಿಕ್ಕಿಬಿದ್ದ ಸಿಸಿಬಿ ಹೆಡ್ ಕಾನ್ಸ್ಟೇಬಲ್ಗಳ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಮೇಲೆ ಟೊಮೆಟೊ ಬಾಕ್ಸ್, ಕೆಳಗೆ ರಕ್ತಚಂದನವಿಟ್ಟು ಸಾಗಣೆ.. ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಪತ್ತೆ ಮಾಡಿದ ಸ್ನೀಪರ್ ಡಾಗ್
ಆಂಧ್ರಪ್ರದೇಶದಿಂದ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಕಳೆದ ಡಿಸೆಂಬರ್ 15ರಂದು ಪೊಲೀಸರು ದಾಳಿ ನಡೆಸಿದ್ದರು. 13 ಲಕ್ಷ ರೂ ಮೌಲ್ಯದ 21 ರಕ್ತಚಂದನ ತುಂಡು ಸಮೇತ ಗೂಡ್ಸ್ ವಾಹನ ವಶಕ್ಕೆ ಪಡೆದಿದ್ದರು. ಅಲ್ಲದೇ, ಮೇಲಾಧಿಕಾರಿಗಳ ಗಮನಕ್ಕೆ ಬರದಂತೆ ರಕ್ತಚಂದನ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸದೇ, ಬಿಟ್ಟು ಕಳುಹಿಸಿದ್ದಲ್ಲದೇ, ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಮಾರಾಟ ಮಾಡಿದ್ದರು ಎಂಬ ಆರೋಪಿಸಲಾಗಿತ್ತು.
ಹೊಸಕೋಟೆ ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿತ್ತು. ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಹಾಗೂ ಮಹದೇವಪುರ ಠಾಣೆಯ ಹೆಚ್.ಸಿ.ಮಮ್ತೇಶ್ ಗೌಡ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಹೊಸಕೋಟೆ: ಅಕ್ರಮವಾಗಿ ಸಾಗಿಸುತ್ತಿದ್ದ 62 ಲಕ್ಷ ರೂ. ಮೌಲ್ಯದ ರಕ್ತಚಂದನ ವಶ
ಪ್ರಕರಣದ ಮಾಹಿತಿ : ಡಿಸೆಂಬರ್ 15 ರಂದು ನೆರೆಯ ಆಂಧ್ರಪ್ರದೇಶದಿಂದ ರೆಡ್ ಸ್ಯಾಂಡಲ್ ಸಾಗಿಸುತ್ತಿರುವ ಬಗ್ಗೆ ಪಕ್ಕಾ ಮಾಹಿತಿ ಪಡೆದಿದ್ದ ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಮತ್ತು ಮಹದೇವಪುರ ಠಾಣೆಯ ಹೆಚ್. ಸಿ ಮಮ್ತೇಶ್ ಗೌಡ ಖಚಿತ ಮಾಹಿತಿ ಮೇರೆಗೆ ಕೋಲಾರದ ಶ್ರೀನಿವಾಸಪುರಕ್ಕೆ ತೆರಳಿದ್ದರು. ಶ್ರೀನಿವಾಸಪುರದಿಂದ ಚಿಂತಾಮಣಿ ಮೂಲಕ ಹೊಸಕೋಟೆಗೆ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ಹಿಂಬಾಲಿಸಿ ಹೊಸಕೋಟೆಯ ಸಂತೇಗೇಟ್ ಬಳಿ ಬರುತ್ತಿದ್ದಂತೆ ಅಪಘಾತದ ಡ್ರಾಮ ಮಾಡಿ ಟಾಟಾಏಸ್ ನಿಲ್ಲಿಸಿದ್ದರು ಎನ್ನಲಾಗಿತ್ತು.
ಇದನ್ನೂ ಓದಿ: ಕಳ್ಳಸಾಗಣೆದಾರರಿಂದಲೇ ರಕ್ತ ಚಂದನ ದೋಚಿದ ಆರೋಪ.. ಇಬ್ಬರು ಪೊಲೀಸರ ವಿರುದ್ಧ FIR