ಪುತ್ತೂರು: ತಾಲೂಕಿನ 31 ಗ್ರಾಪಂಗಳಲ್ಲಿ ಪಂಚಾಯತ್ ರಾಜ್ ಅಭಿವೃದ್ಧಿ ಯೋಜನೆಯನ್ನು ಪರಿಶೀಲನೆ ಮಾಡುತ್ತಿದ್ದು, ಗ್ರಾಮೀಣ ರಸ್ತೆಗಳಿಗೆ 3 ಕೋಟಿ, ಮಳೆಹಾನಿಗೆ 4 ಕೋಟಿ ಅನುದಾನ, ಸಂಸದರ ಅನುದಾನದಿಂದ 45 ಲಕ್ಷ ರೂ., ಶಾಲಾ ದುರಸ್ತಿಗೆ ಮಳೆಹಾನಿ ಯೋಜನೆಯಲ್ಲಿ 1.14 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಮುಂದಿನ 15 ದಿನಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಒಟ್ಟಾರೆ ಶೇ. 90ರಷ್ಟು ಕಾಮಗಾರಿ ಪ್ರಗತಿ ಸಾಧಿಸಬೇಕಾದ ಪ್ರಯತ್ನ ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪ್ರವಾಸಿ ಮಂದಿರದಲ್ಲಿ ಪಂಚಾಯತ್ ರಾಜ್ ಎಂಜಿನಿರ್ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿಗಳ ವಿವರ ನೀಡಿದರು.
ಮಲ್ನಾಡು ಅಭಿವೃದ್ಧಿ ಯೋಜನೆಯಡಿ 80 ಲಕ್ಷ ರೂ. ವೆಚ್ಚದ ಕಾಮಗಾರಿ ಆಗಲಿದ್ದು, ಆಡಳಿತಾತ್ಮಕವಾಗಿ ಅನುಮೋದನೆ ಬಾಕಿ ಇದೆ. 77 ಲಕ್ಷ ರೂ. ವೆಚ್ಚದ ಸಮಗ್ರ ಶಿಕ್ಷಣ ಯೋಜನೆಯ ಕಾಮಗಾರಿ ಪೂರ್ತಿ ಆಗಿದೆ. ಲೋಕಸಭಾ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 2017-18, 2018-19ರಲ್ಲಿ 97 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಎರಡು ತಿಂಗಳಲ್ಲಿ ಈ ಕಾಮಗಾರಿ ಪೂರ್ತಿ ಆಗಲಿದೆ. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 2018-19, 2019-20ರಲ್ಲಿ 1.24 ಕೋಟಿ ಮತ್ತು 2.7 ಕೋಟಿ ರೂ. ಅನುದಾನದ ಕಾಮಗಾರಿಯಲ್ಲಿ ಶೇ. 50ರಷ್ಟು ಪೂರ್ಣಗೊಂಡಿದ್ದು, ಉಳಿದ ಶೇ. 50ರಷ್ಟು ಕಾಮಗಾರಿ ಪ್ರಗತಿಯಲ್ಲಿದೆ.
ಜಲ್ ಜೀವನ್ ಮಿಷನ್ ಕೇಂದ್ರ ಸರ್ಕಾರದ ಕುಡಿಯುವ ನೀರಿನ ಯೋಜನೆಯಲ್ಲಿ ವಿಶೇಷವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 3.76 ಕೋಟಿ ರೂ. ಅನುದಾನ ಬಂದಿದೆ. ಒಟ್ಟು ಹತ್ತು ಪಂಚಾಯತ್ಗಳಿಗೆ ಈ ಯೋಜನೆ ಬಂದಿದ್ದು, ಪುತ್ತೂರು ಹಾಗೂ ಕಡಬ ತಾಲೂಕಿನ ತಲಾ ಐದು ಗ್ರಾಪಂಗಳಿಗೆ ಈ ಹಣ ವಿನಿಯೋಗಿಸಲಾಗುವುದು. ಇದಕ್ಕಾಗಿ ಪೈಪ್‌ಲೈನ್ ಕಾಮಗಾರಿ ನಡೆಯಬೇಕಿತ್ತು. ಶೀಘ್ರ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ನಡೆಸಲಾಗುವುದು ಎಂದರು.
ಕೋವಿಡ್-19 ಸಂದರ್ಭ ಕಾಮಗಾರಿಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಈ ನಿರ್ಬಂಧಗಳನ್ನು ತೆಗೆದು ಹಾಕಲಾಗಿದ್ದು, ಸಂಸದರು, ಶಾಸಕರ ವತಿಯಿಂದ ದ.ಕ ಜಿಲ್ಲೆಗೆ 60 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಮುಖ್ಯಮಂತ್ರಿಗಳು ದ.ಕ ಜಿಲ್ಲೆಗೆ 25 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. ಒಟ್ಟಾರೆಯಾಗಿ ಪುತ್ತೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ವ್ಯವಸ್ಥೆಯಾಗಲಿದೆ ಎಂದು ತಿಳಿಸಿದರು.