ಮಂಗಳೂರು : ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿಯವರನ್ನು ಅಮಾನತು ಮಾಡಿರುವುದು ರಾಷ್ಟ್ರದ ಸಂಸದೀಯ ನಿಯಮ ಹಾಗೂ ಪ್ರಜಾಪ್ರಭುತ್ವದ ಮೇಲೆ ಆಗಿರುವ ದಾಳಿಯಾಗಿದೆ. ಇದು ಪರೋಕ್ಷವಾಗಿ ಭಾರತದ ಆತ್ಮಕ್ಕೆ ಕೊಟ್ಟಿರುವ ಕೊಡಲಿಯೇಟು ಎಂದು ವಿಪಕ್ಷ ಉಪನಾಯಕ ಯುಟಿ ಖಾದರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರನ್ನು ಸತ್ಯ ಮಾತನಾಡಲು ಬಿಡದವರು ಜನಸಾಮಾನ್ಯರನ್ನು ಮಾತನಾಡಲು ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು. ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಅದನ್ನು ಒಂದು ತಿಂಗಳವರೆಗೆ ಅಮಾನತಿನಲ್ಲಿರಿಸಿ ಜಾಮೀನಿಗೆ ಅವಕಾಶ ನೀಡಿದೆ. ಕೋರ್ಟ್ ತನ್ನ ತೀರ್ಪನ್ನು ಅಮಾನತಿನಲ್ಲಿರಿಸಿದ್ದರೂ, ಇವರು ಹೇಗೆ ಸಂಸತ್ ಸ್ಥಾನದಿಂದ ವಜಾಗೊಳಿಸುತ್ತಾರೆ. ಇದು ಸತ್ಯ ವಿಚಾರಗಳನ್ನು ಸಂಸತ್ತಿನಲ್ಲಿ ಮಾತನಾಡಬಾರದೆಂದು ಕಾರಣಕ್ಕೆ ಮಾಡಿರುವ ಷಡ್ಯಂತ್ರ ಎಂದು ಆಪಾದಿಸಿದರು.
ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಮಾತನಾಡುವಾಗ 20 ನಿಮಿಷ ಮೈಕ್ ಆಫ್ ಮಾಡಲಾಗುತ್ತದೆ. ಈಗ ಶಾಶ್ವತವಾಗಿ ಅವರ ಧ್ವನಿಯನ್ನು ಅಡಗಿಸುವ ಕಾರ್ಯತಂತ್ರವನ್ನು ಮಾಡಲಾಗಿದೆ. ಅವರನ್ನು ಗುರಿಯಾಗಿಸಲು ಏನೆಲ್ಲಾ ಪ್ರಯತ್ನ ಮಾಡಬೇಕೋ ಅದನ್ನು ಮಾಡಲು ಎಲ್ಲಾ ರೀತಿಯ ಅಕ್ರಮ ಮಾರ್ಗವನ್ನು ಬಿಜೆಪಿ ಅನುಸರಿಸುತ್ತಿದೆ. ಇದರ ಅರ್ಥವೇನೆಂದರೆ ರಾಹುಲ್ ಗಾಂಧಿಯವರ ಭಯ ಬಿಜೆಪಿಯವರಿಗೆ ಇದೆ. ರಾಹುಲ್ ಗಾಂಧಿಯವರ ಹೋರಾಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಷ್ಟ್ರದ ಜನತೆ ಇರಲಿದ್ದಾರೆ ಎಂದು ಹೇಳಿದರು.
ರಾಹುಲ್ ಮಾನನಷ್ಟ ಮೊಕದ್ದಮೆ ಪ್ರಕರಣ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಯವರನ್ನು ಸೂರತ್ನ ಜಿಲ್ಲಾ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಈ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಕಳೆದ 2019ರ ಏಪ್ರಿಲ್ 13ರಂದು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು. ಈ ವೇಳೆ ರಾಹುಲ್ ಗಾಂಧಿ ಮೋದಿ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಹೇಳಿಕೆ ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಬಳಿಕ ವಾದ ವಿವಾದಗಳನ್ನು ಆಲಿಸಿದ ಸೂರತ್ನ ಜಿಲ್ಲಾ ನ್ಯಾಯಾಲಯ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ದೋಷಿ ಎಂದು ಹೇಳಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದರ ಜೊತೆಗೆ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಗಡುವು ನೀಡಿ, 10,000 ಬಾಂಡ್ ಮೇಲೆ 30 ದಿನಗಳಿಗೆ ಜಾಮೀನು ಕೂಡ ಮಂಜೂರು ಮಾಡಿದೆ.
ಇದನ್ನೂ ಓದಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!