ಪುತ್ತೂರು: ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಂಬ್ರದ ಉದಯ ರೈ ಮಂದಾರ 2017ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ದಿ.ನಾರಾಯಣ ರೈ ಮತ್ತು ಲಲಿತಾ ರೈ ಅವರ ಪುತ್ರರಾಗಿರುವ ಇವರು ಸಿನಿಮಾ ನಟ, ನಿರ್ದೇಶಕ ಸುಂದರ ರೈ ಮಂದಾರರ ಸಹೋದರರಾಗಿದ್ದಾರೆ. ಉದಯ ರೈ 2000 ಜೂನ್ 16 ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಆರಕ್ಷಕರಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಪ್ರಥಮವಾಗಿ ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಬಳಿಕ ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ (ಓ.ಓ.ಡಿ ಜಿಲ್ಲಾ ಅಪರಾಧ ಗುಪ್ತ ವಾರ್ತೆ ವಿಭಾಗ )ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಸೇವೆಗೆ ಸೇರಿದಾಗಿನಿಂದ ವಿಶೇಷವಾಗಿ ಅಪರಾಧ ಪತ್ತೆ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.ಅನೇಕ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 2009 ರಲ್ಲಿ ಅಮಾಯಕ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗುತ್ತೇನೆಂದು ನಂಬಿಸಿ ಸೈನೆಡ್ ನೀಡಿ ಸೀರಿಯಲ್ ಕೊಲೆಗಳನ್ನು ಮಾಡಿದ ಕುಖ್ಯಾತ ಮೋಹನ್ ಕುಮಾರ್‌ರವರನ್ನು ಬಂಧಿಸಿ, 20 ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಇವರು ಭಾಗಿಯಾಗಿರುತ್ತಾರೆ. ಹೀಗೆ ಇವರು ಅನೇಕ ಪ್ರಕರಣಗಳ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ.