ಗ್ರಾಮಾಂತರ ಪ್ರದೇಶಗಳಿಗೆ ತಾತ್ಕಾಲಿಕವಾಗಿ ಬಸ್ ಒದಗಿಸಿ: ಅಧಿಕಾರಿಗಳಿಗೆ ಶಾಸಕರ ಸೂಚನೆ - Provide temporary buses to rural areas
ಖಾಸಗಿ ಬಸ್ ಗಳು ಓಡಾಟ ನಡೆಸದ ಹಿನ್ನೆಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಹಳ್ಳಿಗಳ ಸಂಚಾರಕ್ಕೆ ಸರ್ಕಾರಿ ಬಸ್ ಒದಗಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೂಚನೆ ನೀಡಿದ್ದಾರೆ.
ಬಂಟ್ವಾಳ: ಗ್ರಾಮಾಂತರ ಪ್ರದೇಶಗಳಿಗೆ ತಾತ್ಕಾಲಿಕವಾಗಿ ಸರ್ಕಾರಿ ಬಸ್ ಒದಗಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಬಸ್ ಸಂಚಾರ ಕುರಿತು ಬಿ.ಸಿ.ರೋಡ್ ಘಟಕದ ಕೆಎಸ್ಆರ್ಟಿಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಸಭೆಯಲ್ಲಿ ಬಿ.ಸಿ.ರೋಡ್, ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕ ಶ್ರೀಶ ಭಟ್, ಬಿ.ಸಿ.ರೋಡ್ ಡಿಪೋ ಟ್ರಾಫಿಕ್ ಇನ್ಸ್ಪೆಕ್ಟರ್ ಗಣೇಶ್ ಪೈ, ಆಡಳಿತ ಸಹಾಯಕ ರಮೇಶ್ ಶೆಟ್ಟಿ ವಾಮದಪದವು, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.
ಬಿ.ಸಿ.ರೋಡ್ ಘಟಕದಿಂದ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗೆ ಶಾಸಕರ ಸೂಚನೆ ಕುರಿತು ಪತ್ರ ಬರೆಯಲಾಗಿದ್ದು, ಬಸ್ ಸೌಕರ್ಯ ಒದಗಿಸುವಂತೆ ತಿಳಿಸಲಾಗಿದೆ. ಘಟಕ ವ್ಯಾಪ್ತಿಯ ಬಿ.ಸಿ.ರೋಡ್-ಪೊಳಲಿ-ಕೈಕಂಬ, ಬಿ.ಸಿ.ರೋಡ್-ವಾಮದಪದವು, ಬಿ.ಸಿ.ರೋಡ್-ಕಕ್ಯಪದವು, ಬಿ.ಸಿ.ರೋಡ್-ಸರಪಾಡಿ, ಬಿ.ಸಿ.ರೋಡ್-ಮೂಲರಪಟ್ಣ, ಬಿ.ಸಿ.ರೋಡ್-ಕೊಳತ್ತಮಜಲು ಮಾರ್ಗಗಳಲ್ಲಿ ಮೇ 25ರಂದು ಬಸ್ ಸಂಚಾರ ಪ್ರಾರಂಭಿಸಲು ಶಾಸಕರು ನಿರ್ದೇಶನ ನೀಡಿರುತ್ತಾರೆ.
ಇದರಲ್ಲಿ ಬಿ.ಸಿ.ರೋಡ್-ಪೊಳಲಿ-ಕೈಕಂಬ ಖಾಸಗಿ ಮಾರ್ಗವಾಗಿದ್ದು, ಹೊಸದಾಗಿ ಸರ್ವೇಕ್ಷಣ ನಡೆಯಬೇಕಿದೆ. ಬಸ್ಸುಗಳ ಓಡಾಟಕ್ಕೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.