ಮಂಗಳೂರು: ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ತೆರವುಗೊಳಿಸಲು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಧರಣಿ ನಡೆಸಿದೆ. ಧರಣಿ ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ತಿಂಗಳೊಳಗೆ ತೆರವು ಮಾಡುವ ಭರವಸೆ ನೀಡಿದ್ದಾರೆ.
ಟೋಲ್ ಗೇಟ್ ಬಳಿ ನಡೆದ ಧರಣಿಯಲ್ಲಿ ಮಾತನಾಡಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಅವರು ಗಡುವಿನೊಳಗೆ ತೆರವು ಆಗದಿದ್ದರೆ, ಸಾರ್ವಜನಿಕರು ಟೋಲ್ ಗೇಟ್ ಒಡೆದು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಸುರತ್ಕಲ್ ಎನ್ಐಟಿಕೆ ಟೋಲ್ ತೆರವು ಮಾಡುವ ಅಂತಿಮ ದಿನಾಂಕವನ್ನು ಪ್ರಕಟಣೆ ಮಾಡಿ ಎಂಬುದು ಈ ಧರಣಿಯ ಪ್ರಧಾನ ಬೇಡಿಕೆ. ಅಕ್ಟೋಬರ್ 18ರವರೆಗೆ ಈ ಟೋಲ್ ಗೇಟ್ ಬಂದ್ ಆಗದಿದ್ದಲ್ಲಿ ಟೋಲ್ ಗೇಟ್ ವಿರೋಧಿ ಸಮಿತಿ, ನಾಗರಿಕರು ಸೇರಿ ಮುತ್ತಿಗೆ ಹಾಕಿ ಇದನ್ನು ತೆರವು ಮಾಡುವುದಾಗಿ ಪ್ರತಿಭಟನಾಕಾರರು ಗುಡುಗಿದರು.
ಟೋಲ್ ಗೇಟ್ ಬಳಿ ನಡೆಸುತ್ತಿರುವ ಧರಣಿಯ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲಿಂಗೇಗೌಡ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮನವಿಯನ್ನು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ಟೋಲ್ ಗೇಟ್ ತೆರವಿನ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. 20 ದಿನಗಳಿಂದ ಗರಿಷ್ಠ ಒಂದು ತಿಂಗಳೊಳಗೆ ಸುರತ್ಕಲ್ ಟೋಲ್ ತೆರವು ಆಗಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಅನಧಿಕೃತ ಸುರತ್ಕಲ್ ಟೋಲ್‌ಗೇಟ್ ರದ್ದು ಮಾಡಿ : ಹೋರಾಟ ಸಮಿತಿ ಒತ್ತಾಯ