ಮಂಗಳೂರು: ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಎನ್ಆರ್ ಸಿ, ಸಿಎಎ ಕಾಯ್ದೆಯ ವಿರುದ್ಧದ ಹೋರಾಟ ಎಷ್ಟು ದಿನ ಇದೇ ರೀತಿಯಲ್ಲಿ ಸಾಗುತ್ತೋ ಗೊತ್ತಿಲ್ಲ. ಆದರೆ, ನಾವು ದಾಖಲೆಗಳನ್ನು ನೀಡುವುದಿಲ್ಲ ಎಂಬುವುದರೊಂದಿಗೆ ಇದರ ವಿರುದ್ಧ ಧ್ವನಿ ಎತ್ತಲು ಎಲ್ಲರೂ ಧರ್ಮಾತೀತವಾಗಿ ಒಂದಾಗಬೇಕಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ವಿ ದಿ ಪೀಪಲ್ ಆಫ್ ಇಂಡಿಯಾದ ಸದಸ್ಯ ಹರ್ಷ ಮಂದರ್ ಹೇಳಿದರು.
ನಗರದ ಅಡ್ಯಾರ್ - ಕಣ್ಣೂರು ಶಹಾ ಗಾರ್ಡನ್ ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನದ ವಿಧಿಯಂತೆ ಎಲ್ಲರಿಗೂ ಈ ದೇಶದಲ್ಲಿ ಜೀವಿಸಲು ಸಮಾನ ಹಕ್ಕಿದೆ. ಇಲ್ಲಿ ಯಾರಿಗೂ ಯಾವ ಧರ್ಮವನ್ನಾದರೂ ಅನುಸರಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದರು.
ಜಾತ್ಯಾತೀತ ರಾಷ್ಟ್ರ ಭಾರತವನ್ನು ಆರೆಸ್ಸೆಸ್, ಹಿಂದೂ ಮಹಾಸಭಾ ಹಾಗೂ ಇತರ ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹುನ್ನಾರ ನಡೆಸುತ್ತಿವೆ. ಮಾಹಾತ್ಮಾ ಗಾಂಧಿಯವರ ಅಹಿಂಸಾ ಹೋರಾಟದ ಕಲ್ಪನೆಯ ಭಾರತ, ಅಂಬೇಡ್ಕರ್ ಅವರ ಸಂವಿಧಾನದ ಆಶಯದ ಭಾರತದ ಬಗ್ಗೆ ಹಿಂದೂ ಸಂಘಟನೆಗಳಿಗೆ ಒಲವಿಲ್ಲ. ಭಾರತವನ್ನು ಪರಿಪೂರ್ಣವಾಗಿ ಹಿಂದೂ ರಾಷ್ಟ್ರವಾಗಿಸುವ ಪ್ರಯತ್ನಕ್ಕಾಗಿಯೇ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆಯ ಜಾರಿ ಮಾಡಲಾಗುತ್ತಿದೆ. ಆದರೆ ಜನತೆ ಇದರ ಬಗ್ಗೆ ಎಚ್ಚೆತ್ತಿದ್ದು, ಎಲ್ಲರೂ ಬೀದಿಗಿಳಿದಿದ್ದಾರೆ ಎಂದು ಹರ್ಷ ಮಂದರ್ ಹೇಳಿದರು.