ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 73ರ ಬಿ.ಸಿ. ರೋಡ್ನಿಂದ ಮಾಣಿವರೆಗಿನ ರಸ್ತೆಯಲ್ಲಿ ವಾಹನ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಹತ್ತು ದಿನಗಳಲ್ಲಿ ನಡೆದ ಆರು ಅಪಘಾತಗಳ ಪೈಕಿ ಇಬ್ಬರು ಮೃತಪಟ್ಟರೆ, ಹಲವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬಿ.ಸಿ. ರೋಡ್ ಅಡ್ಡಹೊಳೆ ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಧಿಕೃತವಾಗಿ ಮರುಚಾಲನೆ ದೊರಕಿಲ್ಲ. ಇನ್ನೊಂದೆಡೆ ಮೇಲ್ನೋಟಕ್ಕೆ ರಸ್ತೆ ಸುಂದರವಾಗಿ ಕಂಡರೂ ಅಪಾಯಕಾರಿಯಾದ ರಸ್ತೆಯಂಚು ಮತ್ತು ಯಾವುದೇ ನಿಯಂತ್ರಣವಿಲ್ಲದೇ ಶರವೇಗದಿಂದ ಸಾಗುವ ವಾಹನಗಳು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿವೆ. ಪರಿಣಾಮ ಜೀವಹಾನಿ ಸಂಭವಿಸುತ್ತಿದ್ದು, ಭಾನುವಾರ ಒಂದೇ ದಿನ ಕೆಲವೇ ಮೀಟರ್ಗಳ ಅಂತರದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಸೂರಿಕುಮೇರು ಬಳಿ ಗ್ಯಾಸ್ ಟ್ಯಾಂಕರ್ ಮಗುಚಿ ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾದ ಘಟನೆ ಕಳೆದ ವಾರವಷ್ಟೇ ನಡೆದಿತ್ತು.
ಕಲ್ಲಡ್ಕ ಪೇಟೆಯಲ್ಲಿ ಹೆಚ್ಚು ಅಪಾಯಗಳು ಸಂಭವಿಸುತ್ತಿದೆ. ಮಾಣಿಯಲ್ಲಿ ಪುತ್ತೂರು ಮತ್ತು ಉಪ್ಪಿನಂಗಡಿ ಕಡೆಗೆ ಮಾರ್ಗ ಕವಲಾಗುವಂತೆಯೇ ಕಲ್ಲಡ್ಕದಲ್ಲಿಯೂ ವಿಟ್ಲ ಮತ್ತು ಮಾಣಿ ಕಡೆಗೆ ರಸ್ತೆ ಕವಲೊಡೆಯುತ್ತದೆ. ಈ ಸಂದರ್ಭ ಸುರಕ್ಷಿತ ಚಾಲನೆ ಇಲ್ಲದೇ ಇರುವುದು, ಓವರ್ ಸ್ಪೀಡ್, ಓವರ್ ಟೇಕ್, ರಸ್ತೆಯಲ್ಲಿ ಎಲ್ಲಿ ತಿರುಗಬೇಕು ಎಂಬ ಸೂಚನಾಫಲಕ ಇಲ್ಲದೇ ಇರುವುದು ಮೊದಲಾದ ಕಾರಣಗಳಿಂದ ವಾಹನ ಸವಾರರು ಗಲಿಬಿಲಿಗೊಳ್ಳುತ್ತಾರೆ. ನಿಧಾನವಾಗಿ ಚಲಿಸುವವರೂ ಸಹ ಓವರ್ ಟೇಕ್ ಧಾವಂತದಿಂದ ಅಪಘಾತಕ್ಕೀಡಾಗುತ್ತಿದ್ದಾರೆ. ಸಾಮಾನ್ಯವಾಗಿ ರಸ್ತೆ ದಾಟುವವರು ದುರಂತಕ್ಕೆ ಒಳಗಾಗುವುದುಂಟು.
ಕಳೆದ ಕೆಲ ತಿಂಗಳ ಹಿಂದೆ ಕಲ್ಲಡ್ಕದಲ್ಲಿ ಅಪಘಾತ ಸಂಭವಿಸಿ ಬಿ.ಸಿ. ರೋಡ್ನ ಇಂಜಿನಿಯರ್ ಒಬ್ಬರು ಸಾವನ್ನಪ್ಪಿದ್ದರು. ಈ ವೇಳೆ ರಸ್ತೆ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಬಳಿ ಸೂಚಿಸುವಂತೆ ಜಾಗೃತ ನಾಗರಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಕುರಿತು ಪೊಲೀಸ್ ಇಲಾಖೆ ಎನ್.ಎಚ್.ಎ.ಐ.ಗೆ ತಿಳಿಸಿದ್ದರೂ ಭವಿಷ್ಯದಲ್ಲಿ ರಸ್ತೆ ಅಗಲಗೊಳ್ಳುವ ವೇಳೆ ಎಲ್ಲವೂ ಸರಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ಸುರಕ್ಷತೆಗೆ ಯಾವುದೇ ಮಾರ್ಗೋಪಾಯಗಳನ್ನು ಕೈಗೊಂಡಿಲ್ಲ ಎನ್ನುತ್ತಾರೆ ಪೊಲೀಸರು.
ಈ ಸುದ್ದಿಯನ್ನೂ ಓದಿ: 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಗಮನ ಸೆಳೆದ ವಿಂಟೇಜ್ ರ‍್ಯಾಲಿ
ರಸ್ತೆ ಡಾಂಬರೀಕರಣಗೊಂಡ ಬಳಿಕ ರಸ್ತೆಯಂಚನ್ನೂ ಗಟ್ಟಿಗೊಳಿಸುವುದು ಅಗತ್ಯ. ಸುರಕ್ಷಿತ ವಾಹನ ಚಾಲನೆಗೆ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸುವುದು, ಅನಗತ್ಯ ಓವರ್ ಟೇಕ್ಗಳನ್ನು ಮಾಡುತ್ತಾ ರಾಂಗ್ ಸೈಡ್ನಲ್ಲಿ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅತಿ ಮುಖ್ಯ. ಕಲ್ಲಡ್ಕದಲ್ಲಿ ಅಪಘಾತಗಳು ಸಂಭವಿಸದ ರೀತಿಯಲ್ಲಿ ರಸ್ತೆ ರಚನೆಯಾದರೆ ಸಮಸ್ಯೆ ಇಲ್ಲ. ಇಲ್ಲದೇ ಹೋದರೆ, ಅಪಾಯ ಖಚಿತ. ಸದ್ಯದ ಮಟ್ಟಿಗೆ ವೇಗ ನಿಯಂತ್ರಣವೇ ತಾತ್ಕಾಲಿಕ ಹಾಗೂ ಜೀವಹಾನಿಯಾಗುವುದನ್ನು ತಪ್ಪಿಸಲಿಕ್ಕಿರುವ ಪರಿಹಾರ. ಇಲ್ಲಿ ಓವರ್ ಸ್ಪೀಡ್, ಓವರ್ ಟೇಕ್ ಮಾಡದಂತೆ ಅಪಘಾತ ವಲಯವೆಂದು ವಾಹನ ಸವಾರರಿಗೆ ಮನದಟ್ಟು ಮಾಡುವ ಕಾರ್ಯ ಆಗಬೇಕಿದೆ.