ಬಂಟ್ವಾಳ : ರಾಮಮಂದಿರ ನಿರ್ಮಾಣದ ಶಿಲಾನ್ಯಾಸದ ದಿನ ಗಡ್ಡ, ಕೂದಲಿಗೆ ಮುಕ್ತಿ ನೀಡಲು ಇಲ್ಲೊಬ್ಬ ವ್ಯಕ್ತಿ ಪಣ ತೊಟ್ಟಿದ್ದು, ಅದೀಗ ನನಸಾಗುವ ಹಂತಕ್ಕೆ ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ ಪ್ರಶಾಂತ್ ಭಂಡಾರ್ಕರ್ ಇದೇ ಮೊದಲು ಈ ರೀತಿ ಗಡ್ಡ ಬಿಟ್ಟಿಲ್ಲ. ಈ ಮೊದಲು ಅಂದರೆ ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೆ ಗಡ್ಡ, ಕೂದಲಿಗೆ ಕತ್ತರಿ ಹಾಕದೆ ಶಪಥ ಹಾಕಿ ಸುದ್ದಿಯಾಗಿದ್ದರು. ಪ್ರಮಾಣ ವಚನ ಸ್ವೀಕಾರ ಬಳಿಕವೇ ಅವರು ಗಡ್ಡ, ಕೂದಲಿಗೆ ಕತ್ತರಿ ಹಾಕಿಸಿದ್ದರು.
ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಡಿಗಲ್ಲು ಹಾಕುವ ದಿನದಂದೇ ತನ್ನ ಗಡ್ಡ, ಕೂದಲಿಗೆ ಮುಕ್ತಿ ನೀಡಲು ಪಣ ತೊಟ್ಟಿದ್ದಾರೆ. ನಾಳೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ತನ್ನ ಗಡ್ಡ ಹಾಗೂ ಕೂದಲಿಗೆ ಮುಕ್ತಿ ನೀಡಲಿದ್ದಾರೆ.
ಬಂಟ್ವಾಳ ನೆರೆ ವಿಮೋಚನಾ ರಸ್ತೆಯಲ್ಲಿ ವರ್ಷದ ಹಿಂದೆ ನಿರ್ಮಿಸಿದ್ದ ತನ್ನ ಮನೆಗೂ ಜೈ ಶ್ರೀರಾಮ್ ಎಂದು ಹೆಸರು ಇಟ್ಟುಕೊಂಡಿದ್ದಾರೆ. ಅಪ್ಪಟ ಮೋದಿ ಅಭಿಮಾನಿಯಾಗಿದ್ದರೂ ಪ್ರಧಾನಿ ಯಾರೇ ಆಗಲೀ, ಯಾವ ಪಕ್ಷದವರೇ ಇರಲಿ ಭಾರತದ ಪ್ರಜೆಯಾದ ನಾವು ಆ ಹುದ್ದೆಗೆ ಗೌರವ ನೀಡಲೇಬೇಕು ಅಂತಾರೆ ಇವರು. ಮನೆ ಪಕ್ಕದಲ್ಲಿಯೇ ಸರ್ವೀಸ್ ಸ್ಟೇಷನ್ ನಡೆಸುತ್ತಿರುವ ಇವರು ತಮ್ಮ ವೃತ್ತಿ ಹಾಗೂ ನೌಕರರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಬಂಟ್ವಾಳ ಗ್ಯಾರೇಜು ಮಾಲೀಕರ ಸಂಘದ ಗೌರವ ಸಲಹೆಗಾರರಾದ ಇವರು ಗ್ಯಾರೇಜು ಮಾಲಕರಿಗಷ್ಟೇ ಅಲ್ಲ, ಸುತ್ತಮುತ್ತಲಿನ ಜನತೆಗೂ ಸಹ ಅಚ್ಚುಮೆಚ್ಚು.