ಮಂಗಳೂರು : ನಗರದಲ್ಲಿ ಡಿ. 19 ರಂದು ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಮ್ಯಾಜಿಸ್ಟ್ರೀಯಲ್ ವಿಚಾರಣೆಗೆ ಸಾಕ್ಷಿ ಹೇಳಬೇಕಿದ್ದ 12 ಮಂದಿ ಪೊಲೀಸ್ ಅಧಿಕಾರಿಗಳು ಗೈರು ಹಾಜರಾದ ಅಚ್ಚರಿ ಘಟನೆ ನಡೆದಿದೆ.
ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೀಯಲ್ ವಿಚಾರಣೆಗೆ ಖುದ್ದು ಹಾಜರಾಗಿ ಸಾಕ್ಷಿ ಹೇಳಲು ಕಳೆದ ವಾರ 12 ಮಂದಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಇಂದು ಯಾರೂ ವಿಚಾರಣೆಗೆ ಹಾಜರಾಗದಿರುವುದು ಅನುಮಾನಕ್ಕೂ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ತನಿಖಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಪೊಲೀಸ್ ಇಲಾಖೆಯ ಪರವಾಗಿ ಮ್ಯಾಜಿಸ್ಟ್ರೀರಿಯಲ್ ತನಿಖಾಧಿಕಾರಿ ಜಿ. ಜಗದೀಶ್ ಅವರಿಗೆ ಸಾಕ್ಷ್ಯವನ್ನು ಸಲ್ಲಿಸಿದರು. ಪೊಲೀಸ್ ಇಲಾಖೆಯ ಸಾಕ್ಷಿಗಳಿಗೆ ಸಂಬಂಧಿಸಿದ ದಾಖಲೆಯನ್ನು ಸ್ವೀಕರಿಸಿದ ಅವರು ಮಾ.4ರಂದು ಪೊಲೀಸರ ವೈಯಕ್ತಿಕ ಸಾಕ್ಷ್ಯ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದಾರೆ. ಆದ್ದರಿಂದ ಬೆಳಗ್ಗೆ 11ಕ್ಕೆ ಆರಂಭಗೊಂಡ ವಿಚಾರಣೆಯು ಅರ್ಧ ಗಂಟೆಯೊಳಗೆ ಮುಕ್ತಾಯಗೊಂಡಿತು.
ನೋಟಿಸ್ ಪಡೆದ ಪೊಲೀಸರಿಗೆ ಅನಿವಾರ್ಯ ಕಾರಣದಿಂದ ಸಾಕ್ಷ್ಯ ಸಲ್ಲಿಕೆಗೆ ಹಾಜರಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಕೇವಲ ದಾಖಲೆಗಳ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಅದರಲ್ಲಿ ಮರಣೋತ್ತರ ಪರೀಕ್ಷಾ ವರದಿ, ಕೇಸುಗಳ ದಾಖಲಾತಿ, ಎಫ್ಎಸ್ಎಲ್ ವರದಿ ಸಹಿತ ಪ್ರಮುಖ ಸಾಕ್ಷಿಗಳ ದಾಖಲೆಗಳು ಸೇರಿದ್ದವು.