ಮಂಗಳೂರು (ದ.ಕ): ಚಾಲಕನ ನಿಯಂತ್ರಣ ತಪ್ಪಿ ಪಿಕ್ ಅಪ್ ವಾಹನವೊಂದು ಸುಮಾರು 15 ಅಡಿ ಆಳದಲ್ಲಿರುವ ಮನೆ ಮೇಲೆ ಬಿದ್ದು ಮನೆಯೊಳಗಿದ್ದ ಮೂವರು ಗಾಯಗೊಂಡಿರುವ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಪಿಕ್ ಅಪ್ ವಾಹನ ಹಾಗೂ ಮನೆಗೆ ಹಾನಿಯಾಗಿದ್ದು, ವಾಹನದಲ್ಲಿದ್ದ ಮೂವರು ಕಾರ್ಮಿಕರಿಗೂ ಗಾಯಗಳಾಗಿವೆ. ಚಂದ್ರಯ್ಯ ಆಚಾರ್ಯ ಎಂಬುವರ ಮನೆಯ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮರೋಳಿಯಲ್ಲಿರುವ ಭಾರತ್ ಪ್ರಿಂಟರ್ ಬಳಿಯ ಚಂದ್ರಯ್ಯ ಆಚಾರ್ಯರ ಮನೆ ಬಳಿಯ ರಸ್ತೆಯಲ್ಲಿ ಕೇಬಲ್ ಅಳವಡಿಸಲು ಕಂಬ, ಜಲ್ಲಿ, ಸಿಮೆಂಟ್, ಮರಳು ತುಂಬಿಕೊಂಡು ಬರುತ್ತಿದ್ದ ಪಿಕ್ಅಪ್ ತಗ್ಗು ಪ್ರದೇಶದಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದೆ.
ತಕ್ಷಣ ಪಿಕ್ ಅಪ್ ವಾಹನವನ್ನು ತೆರವುಗೊಳಿಸಲಾಗಿದ್ದು, ನಾಗುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿ: 8 ಜನರಿಗೆ ಗಂಭೀರ ಗಾಯ