ಮಂಗಳೂರು: ಕೋವಿಡ್ ಸೋಂಕಿತರ ಮೃತದೇಹಗಳನ್ನು ಆರೋಗ್ಯ ಕಾರ್ಯಕರ್ತರು ಅಮಾನವೀಯ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ನಡುವೆಯೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಗೌರವಪೂರ್ವಕವಾಗಿ ಮೃತದೇಹದ ಅಂತ್ಯಸಂಸ್ಕಾರ ನಡೆಸಲು ಸ್ವಯಂಸೇವಕರಾಗಿ ಮುಂದಾಗಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಈಗಾಗಲೇ 8 ಜನರ ಎಂಟು ತಂಡಗಳು ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲು ತಯಾರಾಗಿದ್ದು, ಮಂಗಳೂರು, ಬಜ್ಪೆ, ಬಂಟ್ವಾಳ, ಜೋಕಟ್ಟೆ, ಮೂಡುಬಿದಿರೆ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ ಸೋಂಕಿನಿಂದ ಮೃತರಾದ ಮುಸ್ಲಿಂ ಸಮುದಾಯದ 8 ಮಂದಿಯ ಅಂತ್ಯಸಂಸ್ಕಾರದಲ್ಲಿ ಈ ತಂಡಗಳು ಭಾಗವಹಿಸಿವೆ. ಅಲ್ಲದೆ ವಾರಸುದಾರರಿಲ್ಲದ, ಅಂತ್ಯಸಂಸ್ಕಾರ ನಡೆಸಲು ಯಾರೂ ಮುಂದೆ ಬಾರದಿದ್ದ ಸಂದರ್ಭದಲ್ಲಿಯೂ ಈ ತಂಡ ಮುಂದಾಗಲಿದೆ.
ಈ ಬಗ್ಗೆ ಪಿಎಫ್ಐ ದ.ಕ.ಜಿಲ್ಲಾ ಆರೋಗ್ಯ ಮುಖ್ಯಸ್ಥ ಇಲ್ಯಾಸ್ ಬಜ್ಪೆ ಮಾತನಾಡಿ, ಕೋವಿಡ್ ಸೋಂಕಿತ ಮೃತರ ಅಂತ್ಯಸಂಸ್ಕಾರ ನಡೆಸಲು ಆರೋಗ್ಯ ಕಾರ್ಯಕರ್ತರಿಗೆ ಸಹಕರಿಸಲು ಪಿಎಫ್ಐ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಎಂಟು ಮೃತದೇಹಗಳ ದಫನ್ ಕಾರ್ಯದಲ್ಲಿ ಭಾಗವಹಿಸಿದೆ ಎಂದರು.
ನಂತರ ಮಾತನಾಡಿದ ಅವರು, ನಮ್ಮ ಸ್ವಯಂಸೇವಕರ ತಂಡಗಳಿಗೆ ಬೇಕಾದ ಪಿಪಿಇ ಕಿಟ್ ಗಳನ್ನು ಜಿಲ್ಲಾಡಳಿತ ಒದಗಿಸಿದ್ದರೂ, ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಆದ್ದರಿಂದ ಅಗತ್ಯವಿರುವಷ್ಟು ಪಿಪಿಇ ಕಿಟ್ ಗಳನ್ನು ನಾವೇ ಖರೀದಿಸುತ್ತಿದ್ದೇವೆ. ಅಂತ್ಯಸಂಸ್ಕಾರದ ಬಳಿಕ ಮುಂಜಾಗ್ರತಾ ದೃಷ್ಟಿಯಿಂದ ಅಗತ್ಯ ಶುಚಿತ್ವ ಕ್ರಮಗಳನ್ನು ಪಾಲಿಸಿಯೇ ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೇವೆ. ಈಗಾಗಲೇ ಜಿಲ್ಲಾಡಳಿತದ ಅನುಮತಿಯೊಂದಿಗೆ ಎಂಟು ತಂಡಗಳನ್ನು ತಯಾರು ಮಾಡಲಾಗಿದೆ. ಇದೀಗ ಉಡುಪಿಯಲ್ಲಿಯೂ ಇದೇ ರೀತಿ ತಂಡಗಳನ್ನು ತಯಾರು ಮಾಡಲಾಗುತ್ತದೆ ಎಂದು ಹೇಳಿದರು.