ಕಡಬ(ದಕ್ಷಿಣ ಕನ್ನಡ): ಯುವಕನೋರ್ವ ತನ್ನ ಗೆಳತಿಗೆ 15ಕ್ಕೂ ಅಧಿಕ ಸ್ನೇಹಿತರ ಫೋನ್ಗಳಿಂದ ಮೆಸೇಜ್ ಮಾಡಿದ್ದನು. ಇದರಿಂದ ತೊಂದರೆಗೊಳಗಾದ ಯುವತಿ ದೂರು ದಾಖಲಿಸಿದ್ದು, ಮೊಬೈಲ್ ನೀಡಿದವರು ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಸಮೀಪದ ಕೊಕ್ಕಡದ ಯುವಕನೋರ್ವ ಕಡಬದ ಯುವತಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದ. ಬಳಿಕ ವೈಮನಸ್ಸು ಉಂಟಾಗಿ, ಆತನ ಕರೆ ಮತ್ತು ಸಂದೇಶ ಬಾರದಂತೆ ಯುವತಿ ಆತನ ನಂಬರ್ ಬ್ಲಾಕ್ ಮಾಡಿದ್ದಳು. ಹೀಗಾಗಿ ಯುವಕ ಹೋದಲ್ಲೆಲ್ಲ ಸಿಗುವ ಸ್ನೇಹಿತರ ಬಳಿ ಒಂದು ತುರ್ತು ಕರೆ ಮಾಡಲು ಇದೆ, ಫೋನ್ ಚಾರ್ಜ್ ಖಾಲಿಯಾಗಿದೆ ಎಂದೇಳಿಕೊಂಡು ಮೊಬೈಲ್ ಪಡೆದು ಆಕೆಗೆ ಸಂದೇಶ ರವಾನಿಸಿದ್ದ. ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದನು. ಹೀಗೆ ಸುಮಾರು 15 ಕ್ಕೂ ಅಧಿಕ ತನ್ನ ಆಪ್ತರ ಫೋನ್ ಬಳಸಿ ಸಂದೇಶ ರವಾನಿಸಿರುವುದು ತಿಳಿದುಬಂದಿದೆ.
ಹೊಸ ಹೊಸ ನಂಬರ್ಗಳಿಂದ ನಿರಂತರವಾಗಿ ಮೆಸೇಜ್ ಬರುತ್ತಿರುವುದರಿಂದ ತೊಂದರೆಗೊಳಗಾದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ತನಿಖೆ ಕೈಕೊಂಡ ಪೊಲೀಸರು, ಯುವತಿಗೆ ಬಂದಿದ್ದ ಎಲ್ಲಾ ನಂಬರ್ಗೆಳಿಗೆ ಕರೆ ಮಾಡಿದ್ದರು. ಖಾಕಿ ಕರೆಯಿಂದ ಭಯಗೊಂಡರೂ ಕೆಲವರು ಠಾಣೆಗೆ ವಿಚಾರ ತಿಳಿದುಕೊಳ್ಳಲು ಆಗಮಿಸಿದ್ದರು. ಈ ವೇಳೆ ಮಾಡದ ತಪ್ಪಿಗೆ ಠಾಣೆಗೆ ಹೋಗುವಂತೆ ಮಾಡಿದ ಯುವಕನ ವಿರುದ್ಧ ಕೆಲವರು ಗರಂ ಆಗಿ ಠಾಣೆಯಲ್ಲೂ ಮಾತಿನ ಚಕಮಕಿ ಕೂಡ ನಡೆದಿತ್ತು ಎನ್ನಲಾಗುತ್ತಿದೆ.
ಇಷ್ಟೆಲ್ಲ ಆದ ಬಳಿಕ ಯುವತಿಗೆ ಸಂದೇಶ ಮಾಡಿರುವುದು ತಾನೇ ಎಂದು ಯುವಕ ಒಪ್ಪಿಕೊಂಡ ಕಾರಣ ಇತರ ಸ್ನೇಹಿತರು ನಿಟ್ಟುಸಿರು ಬಿಟ್ಟಿದ್ದಾರೆ. ಆತನಿಂದ ಮುಚ್ಚಳಿಕೆ ಬರೆಸಿ ಕಳುಹಿಸಿದ ಪೊಲೀಸರು ಮತ್ತೊಬ್ಬರಿಗೆ ಮೊಬೈಲ್ ಫೋನ್ ಕೊಡುವ ಮುನ್ನ ಎಚ್ಚರ ವಹಿಸುವಂತೆ ಜನತೆಗೆ ಸಂದೇಶ ನೀಡಿದ್ದಾರೆ.