ಮಂಗಳೂರು: ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದ್ದು, ಎಲ್ಲೆಡೆ ಆಕ್ಸಿಜನ್ ಕೊರತೆ ಕಾಡುತ್ತಿದೆ. ಇಂಥ ಸ್ಥಿತಿಯಲ್ಲಿ ಮಿತ್ರರಾಷ್ಟ್ರ ಬಹರೈನ್ ಭಾರತದ ನೆರವಿಗೆ ನಿಂತಿದೆ. 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಅನ್ನು ಬಹರೈನ್ ಭಾರತಕ್ಕೆ ಕಳುಹಿಸಿ ಮಿತ್ರರಾಷ್ಟ್ರದ ಕರ್ತವ್ಯ ನಿಭಾಯಿಸಿದೆ.
ಬಹರೈನ್ ಕಳುಹಿಸಿದ 40 ಮೆಟ್ರಿಕ್ ಟನ್ ಆಕ್ಸಿಜನ್ ಇಧೀಗ ಮಂಗಳೂರಿನ ಎನ್ಎಂಪಿಟಿ ಬಂದರಿಗೆ ಆಗಮಿಸಿದೆ. ಭಾರತೀಯ ಕರಾವಳಿ ತಟರಕ್ಷಣಾ ಪಡೆಯ ಐಎನ್ಎಸ್ ತಲ್ವಾರ್ ಹಡಗು ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರುಗಳನ್ನು ಬಹರೈನ್ ಮನಮಾ ಬಂದರಿನಿಂದ ಹೊತ್ತು ತಂದಿದೆ. ಬಹರೈನ್ ಹಾಗೂ ಭಾರತ ಸರಕಾರದ ಒಪ್ಪಂದದಂತೆ ಈ ಕೊರೊನಾ ಸಂಕಷ್ಟಕಾಲದಲ್ಲಿ ನೆರವಿನ ಯೋಜನೆಯ ಸಮುದ್ರಸೇತು ಕಾರ್ಯಕ್ರಮದಡಿ ಈ ಆಕ್ಸಿಜನ್ ಅನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದೆಹಲಿ ಕಚೇರಿಗೆ ಸರಬರಾಜು ಮಾಡಲಾಗಿದೆ.
ಮಧ್ಯಾಹ್ನ ಎರಡರ ಸುಮಾರಿಗೆ ತಲ್ವಾರ್ ಹಡಗು ಆಕ್ಸಿಜನ್ ಹೊತ್ತುಕೊಂಡು ಮಂಗಳೂರು ಬಂದರು ತಲುಪಿದೆ. ಜಿಲ್ಲಾಡಳಿತ ಹಾಗೂ ಶಿಪ್ಪಿಂಗ್ ಕಂಪೆನಿಯ ಸಹಾಯದಿಂದ ಆಕ್ಸಿಜನ್ ಟ್ಯಾಂಕರುಗಳನ್ನು ಇಳಿಸುವ ಕಾರ್ಯ ಇದೀಗ ತಾನೆ ಮುಗಿದಿದೆ. ಸರಕಾರದ ಸೂಚನೆಯಂತೆ ಅವಶ್ಯಕತೆಯುಳ್ಳ ಜಿಲ್ಲೆಗಳಿಗೆ ಈ ಆಕ್ಸಿಜನ್ ಸರಬರಾಜು ಆಗಲಿದೆ.