ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ.
2020 ಜನವರಿ 20ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಕರೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ವಿಮಾನ ನಿಲ್ದಾಣದ ಎದುರಿನ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಬಾಂಬ್ ಇದ್ದ ಬ್ಯಾಗ್ ಅನ್ನು ‘ಥ್ರೆಟ್ ಕಂಟೇನ್ಮೆಂಟ್’ ವಾಹನಕ್ಕೆ ಸ್ಥಳಾಂತರಿಸಿದ ಬಳಿಕ ಪರಿಸ್ಥಿತಿ ತುಸು ತಿಳಿಯಾಗಿತ್ತು.
ಬಳಿಕ ಸ್ಫೋಟಕ ಇರುವ ಬ್ಯಾಗ್ ಸಮೇತ ಬಾಂಬ್ ನಿಷ್ಕ್ರಿಯ ದಳದ ವಾಹನವನ್ನು ವಿಮಾನ ನಿಲ್ದಾಣದ ಸಮೀಪವಿರುವ ಕೆಂಜಾರು ಪ್ರದೇಶಕ್ಕೆ ಸ್ಥಳಾಂತರಿಸಿ ತಜ್ಞ ಸಿಬ್ಬಂದಿ ಬಾಂಬ್ ನಿಷ್ಕ್ರಿಯ ಪ್ರಕ್ರಿಯೆ ನಡೆಸಿ ಸುಮಾರು 350 ಮೀಟರ್ ದೂರದಲ್ಲಿ ವೈರ್ ಬಳಸಿ ಸಂಜೆ ಆರು ಗಂಟೆ ಸುಮಾರಿಗೆ ಸ್ಫೋಟಿಸಲಾಯಿತು.
ಈ ಸ್ಫೋಟಕವನ್ನು ವಿಮಾನ ನಿಲ್ದಾಣದಲ್ಲಿ ಇಟ್ಟುಹೋದವರು ಯಾರು? ಎಂಬ ಕುರಿತು ತಲೆಕೆಡಿಸಿಕೊಂಡಿದ್ದ ಪೊಲೀಸರು ಸಿಸಿ ಕ್ಯಾಮರಾದ ಸಹಾಯದಿಂದ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿರುವ ಶಂಕಿತ ವ್ಯಕ್ತಿಯ ಹಾಗೂ ಆತನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಟೋದ ಚಿತ್ರವನ್ನು ಸಂಜೆ ವೇಳೆಗೆ ಬಿಡುಗಡೆ ಮಾಡಿದ್ದರು. ಆತ ಬೆಳಗ್ಗೆ 7 ರಿಂದ 8 ಗಂಟೆಯ ಅವಧಿಯಲ್ಲಿ ಆಟೋದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಲ್ಯಾಪ್ಟಾಪ್ ಬ್ಯಾಗ್ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದ.
ಆ ಬಳಿಕ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸುತ್ತಿರುವಾಗಲೇ ಜ.22ರಂದು ಸ್ಫೋಟಕವನ್ನು ಇರಿಸಿದ್ದ ಆದಿತ್ಯರಾವ್ ಎಂಬ ಆರೋಪಿ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ತಾನೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿರುವುದಾಗಿ ಶರಣಾಗಿದ್ದ. ಅಲ್ಲಿಂದ ಆತನನ್ನು ಪೊಲೀಸರು ಮಂಗಳೂರಿಗೆ ಕರೆತಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಎಸಿಪಿ ಬೆಳ್ಳಿಯಪ್ಪ ಅವರನ್ನ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಜ.23ರಂದು ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಅಲ್ಲಿಂದ ಆತನನ್ನು ಹತ್ತು ದಿನಗಳ ಕಾಲ ತನಿಖಾ ತಂಡದ ವಶಕ್ಕೆ ನೀಡಲಾಗಿತ್ತು. ಕಸ್ಟಡಿ ಅವಧಿ ಮುಗಿದ ಬಳಿಕ ಮತ್ತೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.
ಪ್ರಕರಣದ ತನಿಖಾ ಪ್ರಕ್ರಿಯೆಯು ಕಳೆದ ಎಪ್ರಿಲ್‌ನಲ್ಲಿ ಫೂರ್ಣಗೊಂಡಿದ್ದು, 700 ಪುಟಗಳ ಚಾರ್ಜ್ ಶೀಟ್ ಅನ್ನು ತನಿಖಾಧಿಕಾರಿ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿಯೂ ಆಗಿರುವ ಕೆ.ಯು.ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಆದಿತ್ಯ ರಾವ್ ದುಷ್ಕೃತ್ಯ ಎಸಗಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದನು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ಆತ ಇರಿಸಿ ಹೋಗಿದ್ದ ಬ್ಯಾಗಿನಲ್ಲಿ ಕಂಡು ಬಂದಿರುವ ಅನುಮಾನಸ್ಪದ ವಸ್ತುಗಳು ಸ್ಫೋಟಕಗಳೇ ಆಗಿವೆ ಎನ್ನುವುದು ಎಫ್ ಎಸ್‌ಎಲ್ ಟೆಸ್ಟ್‌ನಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿತ್ತು.
ಇಂದಿಗೆ ಆದಿತ್ಯರಾವ್ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿ ಒಂದು ವರ್ಷವಾಗಿದ್ದು, ಆತ ಈಗಲೂ ಕಾರಾಗೃಹದಲ್ಲಿದ್ದಾನೆ.