ಕಡಬ/ದಕ್ಷಿಣಕನ್ನಡ : ಕಡಬಕ್ಕೆ ಪಟ್ಟಣ ಪಂಚಾಯತ್ ಸ್ಥಾನಮಾನ ಲಭಿಸಿದರೂ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳಿಂದ ಕಡಬ ವಂಚಿತವಾಗುತ್ತಿದೆ. ಸುಮಾರು 16 ತಿಂಗಳುಗಳ ಹಿಂದೆ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಕಡಬ ತಾಲೂಕಾಗಿ ಘೋಷಣೆಯಾಗಿದೆ.
ಇದರ ಕೆಲಸಗಳೇ ಆಮೆಗತಿಯಲ್ಲಿ ಸಾಗುತ್ತಿವೆ. ಇನ್ನೊಂದು ಕಡೆ ಕಡಬ-ಕೋಡಿಂಬಾಳ ಗ್ರಾಮಗಳನ್ನು ಏಕೀಕರಣಗೊಳಿಸುವ ಮೂಲಕ ಅಸ್ತಿತ್ವಕ್ಕೆ ಬಂದ ಕಡಬ ಪಟ್ಟಣ ಪಂಚಾಯತ್ ಇದೀಗ ಅಭಿವೃದ್ಧಿ ಕಾಣದೇ ಇಲ್ಲಿನ ಜನರಿಗೆ ತೊಂದರೆಯಾಗಿ ಪರಿಣಮಿಸುತ್ತಿದೆ ಎಂಬ ಆರೋಪ ಕೇಳಿ ಬರಲಾರಂಭಿಸಿದೆ.
ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ 18.70 ಚದರ ಕಿ.ಮೀ. ಅಂದರೆ ಅಂದಾಜು 5629.67 ಎಕರೆ ಭೌಗೋಳಿಕ ವಿಸ್ತೀರ್ಣ ಮತ್ತು 2011ರ ಜನಗಣತಿಯಲ್ಲಿ 9,546 ಜನಸಂಖ್ಯೆ ಹೊಂದಿರುವ ಕಡಬ ಗ್ರಾಮ ಪಂಚಾಯತ್‌ನ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲಾಗಿತ್ತು.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಭೌಗೋಳಿಕ ವಿಸ್ತೀರ್ಣದ ಶೇ.55 ಅಂದರೆ 3060.57 ಎಕರೆ ಭಾಗ ಕೃಷಿಯೇತರ ಚಟುವಟಿಕೆಯ ಭೂಮಿಯಾಗಿದೆ. ಶೇ.45 ಅಂದರೆ ಸುಮಾರು 2569.10 ಎಕರೆ ಭಾಗ ಕೃಷಿ ಚಟುವಟಿಕೆಯ ಭೂಮಿಯಾಗಿದೆ.
ಈಗಾಗಲೇ ಪಟ್ಟಣ ಪಂಚಾಯತ್ ಆಗಿ ಕಡಬ ಮೇಲ್ದರ್ಜೆಗೆ ಏರಿದ ನಂತರದಿಂದ ವಾಣಿಜ್ಯ, ಗೃಹ ತೆರಿಗೆಗಳು ಸೇರಿದಂತೆ ಎಲ್ಲಾ ತೆರಿಗೆಗಳನ್ನು ಏರಿಸಲಾಗಿದೆ. ಇದು ಅಭಿವೃದ್ಧಿ ನಿಟ್ಟಿನಲ್ಲಿ ಉತ್ತಮವೇ ಆದರೂ, ಅಭಿವೃದ್ಧಿಗಳು ಮಾತ್ರ ಕಡಬ ಪಟ್ಟಣ ಪಂಚಾಯತ್‌ಗೆ ಸಂಬಂಧಿಸಿದಂತೆ ಮರೀಚಿಕೆಯಾಗಿದೆ.
ಉದಾಹರಣೆಗೆ ಬೀದಿದೀಪಗಳು, ಒಳಚರಂಡಿ ವ್ಯವಸ್ಥೆಗಳು, ಪೇಟೆಯಲ್ಲಿ ವಾಹನ ನಿಲುಗಡೆ ಸಮಸ್ಯೆಗಳು ಹಾಗೇ ಇವೆ. ಗ್ರಾಮೀಣ ಪ್ರದೇಶಗಳ ರಸ್ತೆಗಳು ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪ.
ಪಟ್ಟಣ ಪಂಚಾಯತ್ ಆಗಿ ಕಡಬ ಬದಲಾವಣೆ ಆದರೂ,ಪಟ್ಟಣ ಪಂಚಾಯತ್‌ಗೆ ಸಂಬಂಧಿಸಿದಂತೆ ಚುನಾವಣೆ ನಡೆಯದೇ ಇರುವುದು ಮತ್ತು ಪೂರ್ಣ ಪ್ರಮಾಣದ ಅಧಿಕಾರಿಗಳ ನೇಮಕವಾಗದೇ ಇರುವುದು, ಮೂಲಸೌಕರ್ಯ ಅಭಿವೃದ್ಧಿಗಳಿಂದ ಕಡಬ ಪಟ್ಟಣ ಪಂಚಾಯತ್ ವಂಚಿತವಾಗಲು ಕಾರಣ ಎನ್ನಲಾಗಿದೆ.