ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕರಿಂಜೆ ಗ್ರಾಮದಲ್ಲಿರುವ ಶ್ರೀಲಕ್ಷ್ಮಿ ಸತ್ಯನಾರಾಯಣ ವೀರಾಂಜನೇಯ ದೇವಳದ ನೂತನ ಗರ್ಭಗುಡಿಯ ಶಿಲಾನ್ಯಾಸವು ಕೇರಳ ಹಾಗೂ ತುಳುನಾಡಿನ ವಿಶಿಷ್ಟ ವಾಸ್ತು ಶೈಲಿಯಲ್ಲಿ ಬಹುತೇಕ ಸಂಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ದಗೊಂಡಿದೆ.
ಫೆ.9ರಿಂದ ಹತ್ತು ದಿನಗಳ ಪರ್ಯಂತ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ನಾಗಮಂಡಲೋತ್ಸವ ಕಾರ್ಯಕ್ರಮ ನೆರವೇರಲಿದೆ. ಮಠವನ್ನು ಮಂತ್ರಾಲಯದ ಸುಬುಧೇಂದ್ರ ತೀರ್ಥರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶ್ರೀಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಮೂಡುಬಿದಿರೆ ಜೈನಮಠದ ಸ್ವಾಮೀಜಿ, ವಜ್ರದೇಹಿ ಮಠದ ಸ್ವಾಮೀಜಿ, ಬಲ್ಯೊಟ್ಟು, ಕೊಂಡೆವೂರು, ಮಾಣಿಲದ ಸ್ವಾಮೀಜಿ, ಪಲಿಮಾರು ಶ್ರೀಗಳು, ಕಟಪಾಡಿ ಶ್ರೀಗಳು ಸೇರಿದಂತೆ ಹಲವಾರು ಸಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ವಿಶೇಷವಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡಿನ ಬೇರೆ ಬೇರೆ ಅರಸು ಮನೆತನಗಳ ಪ್ರತಿನಿಧಿಗಳು ವಹಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದರು.