ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಗೋಸಾಗಣೆ ವಿಚಾರದಲ್ಲಿ ಪದೇ ಪದೆ ಉದ್ವಿಗ್ನ ವಾತಾವರಣಗಳು ನಿರ್ಮಾಣವಾಗುತ್ತಿದೆ. ಅಕ್ರಮ ಗೋಸಾಗಣೆ ವಿಚಾರದಲ್ಲಿ ಸಕ್ರಮವಾಗಿ ನಡೆಯುವ ಗೋಸಾಗಣೆ ಸಮಸ್ಯೆಯೊಡ್ಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಅಕ್ರಮ ಗೋಸಾಗಣೆ ಗುರುತಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಗೂಗಲ್ ಆ್ಯಪ್ ಅಭಿವೃದ್ದಿಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಅಕ್ರಮ ಗೋಸಾಗಣೆ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈಷಮ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆ್ಯಪ್ ರಚನೆ ಆಗಿದೆ. ಲೈವ್ ಸ್ಟಾಕ್ ಲಾಜಿಸ್ಟಿಕ್ ಕಂಟ್ರೋಲ್ ಎಂಬ ಆ್ಯಪ್ ಇನ್ನೆರಡು ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಎಲ್ ಎಲ್ ಸಿ ಹೆಸರಿನಲ್ಲಿ ಸಿಗಲಿದೆ. ಅಕ್ರಮವಲ್ಲದೇ ಯಾವುದೇ ಉದ್ದೇಶಕ್ಕಾಗಿ ಗೋಸಾಗಣೆ ಮಾಡುವವರು ಈ ಆ್ಯಪ್ ನಲ್ಲಿ ಪೊಟೋ ಸಮೇತ ಗೋಸಾಗಣೆ ವಿವರಗಳನ್ನು ನೀಡಿದರೆ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಪೊಲೀಸರ ತಪಾಸಣೆ ವೇಳೆ ಇದನ್ನು ತೋರಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು.
ಆ್ಯಪ್ ಮೂಲಕ ಗೋ ಸಾಗಣೆದಾರರು ಮಾಹಿತಿ ಒದಗಿಸುವುದು ಕಡ್ಡಾಯ. ಅಲ್ಲದಿದ್ದರೂ ಇದರಿಂದ ಕಾನೂನು ರೀತಿಯಲ್ಲಿ ಗೋವುಗಳ ಸಾಗಣೆ ಮಾಡುವವರು ಎಲ್ಲಿಂದ ಎಲ್ಲಿಗೆ, ಯಾರಿಂದ ಗೋವುಗಳನ್ನು ಸಾಗಣೆ ಮಾಡುತ್ತಾರೆ ಎಂಬ ಮಾಹಿತಿ ಆ್ಯಪ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗುತ್ತದೆ ಎಂದರು.
ಅಕ್ರಮ ಗೋಸಾಗಣೆ ಮಾಡುವುದು ಮತ್ತು ಅಕ್ರಮ ಗೋಸಾಗಣೆ ಮಾಡಲಾಗುತ್ತದೆ ಎಂದು ತಪಾಸಣೆ ಮಾಡುವುದು ಕಾನೂನು ಬಾಹಿರ. ಅಕ್ರಮ ಗೋಸಾಗಣೆ ಮಾಹಿತಿಯಿದ್ದರೆ 1077 ಅಥವಾ 100 ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು. ಬಕ್ರೀದ್ ಹಬ್ಬವನ್ನು ಸೌಹಾರ್ದಯುತವಾಗಿ ನಡೆಸುವ ನಿಟ್ಟಿನಲ್ಲಿ ಅಕ್ರಮವಾಗಿ ಗೋಸಾಗಣೆ ಮಾಡುತ್ತಾರೆಂಬ ಗುಮಾನಿಯಲ್ಲಿ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.