ಮಂಗಳೂರು : ಕಾಂಗ್ರೆಸ್ ಕರ್ನಾಟಕದ ವಿಧಾನ ಪರಿಷತ್ ಒಳಗಡೆ ದಾಂಧಲೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ರಾಜಕಾರಣವೇ ಗೂಂಡಾ ರಾಜಕಾರಣ. ಹಿಂದೆ ಹೊರಗಡೆ ಗೂಂಡಾಗಿರಿ ಮಾಡುತ್ತಿತ್ತು. ಇದೀಗ ಉಪಸಭಾಪತಿಯ ಮೇಲೆಯೇ ಹಲ್ಲೆ ಮಾಡುವ ಮೂಲಕ ತನ್ನ ಗೂಂಡಾಗಿರಿ ಪ್ರವೃತ್ತಿಯನ್ನು ವಿಧಾನ ಪರಿಷತ್‌ನೊಳಗಡೆ ತಂದಿದೆ. ಇದು ರಾಜ್ಯಕ್ಕೆ ಅವಮಾನಕರ ಸಂಗತಿ. ಹಾಗಾಗಿ, ಕಾಂಗ್ರೆಸ್ ಜನತೆಯ ಮುಂದೆ ಕ್ಷಮೆಯಾಚಿಸಬೇಕು ಎಂದರು.
ಇತಿಹಾಸ, ಪರಂಪರೆಗಳಿರುವ, ರಾಜ್ಯದ ಬಗ್ಗೆ ಚರ್ಚೆಗಳು ನಡೆಯುವ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ದಾಂಧಲೆ ನಡೆಸಿದೆ. ಇಲ್ಲಿ ಮಾರ್ಗದರ್ಶನ ಮಾಡುವ ವಿಚಾರ ವಿಧಾನ ಪರಿಷತ್ ನಲ್ಲಿ ಅನುಷ್ಠಾನ ಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಅಲ್ಲಿನ ಸಭಾಪತಿ, ಉಪ ಸಭಾಪತಿ ಪೀಠ ಬಹಳ ಶ್ರೇಷ್ಠವಾಗಿರುವ ಪೀಠ ಎಂದರು.
ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯವಾದ ಮೇಲೆ ಆ ಪೀಠದಲ್ಲಿ ಅವರು ಕುಳಿತುಕೊಳ್ಳುವಂತಿಲ್ಲ. ಉಪಸಭಾಪತಿಗಳು ನಿರ್ಣಯ ಮಾಡಬೇಕು. ಉಪಸಭಾಪತಿ ಕುಳಿತ ಮೇಲೆ ಅವರನ್ನು ಎಳೆದಾಡಿ, ತಳ್ಳಿ ದಾಂಧಲೆ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಓದಿ...ಉಪಸಭಾಪತಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ತನಿಖೆಯಾಗಬೇಕು : ತೇಜಸ್ವನಿಗೌಡ ಆಗ್ರಹ
ವಿಧಾನಪರಿಷತ್‌ನೊಳಗಡೆ ಕಾಂಗ್ರೆಸ್ಗೆ ಬಹುಮತವೂ ಇಲ್ಲ. ಆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯ ಮಾಡಿದ್ದಾರೆ. ಹಾಗಾಗಿ ಉಪಸಭಾಪತಿಗಳ ಮುಖಾಂತರ ಸಭೆ ನಡೆಸಬೇಕಿತ್ತು.
ಇಂದು ಸಂವಿಧಾನಕ್ಕೆ ಗೌರವ ಕೊಡದೆ ವಿಧಾನ ಪರಿಷತ್, ವಿಧಾನಸಭೆಗೆ ಮಾಡಿರುವ ಅವಮಾನ. ಹಾಗಾಗಿ ಕಾಂಗ್ರೆಸ್ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಲಿ ಎಂದು ನಳಿನ್ ಕುಮಾರ್ ಕಟೀಲು ಆಗ್ರಹಿಸಿದರು.