ಮಂಗಳೂರು: ದ.ಕ.ಜಿಲ್ಲೆಯನ್ನು ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ ಹಾಗೂ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ.
ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ಆಡಳಿದಲ್ಲಿ ಕೊಲೆಯ ರಾಜಕಾರಣ, ದರೋಡೆಗಳನ್ನು ಪೂರ್ತಿ ನಿಲ್ಲಿಸಲಾಗಿದೆ. ವಿಡಿಯೋ ಗೇಮ್, ಪಬ್ಗಳನ್ನು ನಿಲ್ಲಿಸುತ್ತೇವೆ. ಡ್ರಗ್ಸ್ ದಂಧೆಯನ್ನೂ ನಿಲ್ಲಿಸಲಾಗುತ್ತದೆ. ಹಾಗೆಯೇ ಜಿಲ್ಲೆಯಲ್ಲಿ ಯಾರಾದರೂ ಅಕ್ರಮ ಮರಳುಗಾರಿಕೆ ನಡೆಸಿದರೆ ಬಿಜೆಪಿ ಕಾರ್ಯಕರ್ತರಾಗಿದ್ದರೂ ಅವರನ್ನೂ ಜೈಲಿಗೆ ಹಾಕುವಂತೆ ಗಣಿ ಇಲಾಖೆಗೆ ಆದೇಶಿಸಿದ್ದೇನೆ. ಈ ಬಗ್ಗೆ ಯಾವುದೇ ದಾಕ್ಷಿಣ್ಯವಿಲ್ಲ ಎಂದು ತಿಳಿಸಿದರು.
ನಂತರ ಮಾತನಾಡಿದ ಅವರು, ಕಾಂಗ್ರೆಸ್ನವರು ಆಡಳಿದಲ್ಲಿರುವಾಗ ಜಿಲ್ಲೆಯಲ್ಲಿ ಸಾಕಷ್ಟು ಜನರ ಹತ್ಯೆಯಾಯಿತು. ಅದೇ ರೀತಿ ಸಾಕಷ್ಟು ಮಂದಿಯ ಮೇಲೆ ಹಲ್ಲೆಗಳು ನಡೆದವು. ಹಟ್ಟಿಯಿಂದಲೇ ಗೋವುಗಳನ್ನು ಅಪಹರಣ ಮಾಡಲಾಯಿತು. ಕಾಂಗ್ರೆಸ್ನವರ ಆಡಳಿತವು ಹತ್ಯೆ ಮತ್ತು ಹಲ್ಲೆಗಳ ದಿನಗಳಾಗಿದ್ದವು. ಕಾಂಗ್ರೆಸ್ನ ಜನಪ್ರತಿನಿಧಿಗಳೇ ಮರಳು ಮಾಫಿಯಾದಲ್ಲಿದ್ದರು. ರಮಾನಾಥ ರೈ ಹೆಸರು ನೇರವಾಗಿ ಮರಳು ಮಾಫಿಯಾದಲ್ಲಿ ಕೇಳಿ ಬಂದಿತ್ತು. ಅಲ್ಲದೇ, ಕಳ್ಳ ವ್ಯಾಪಾರಗಳು ಸಹ ನಡೆಯುತ್ತಿದ್ದವು ಎಂದು ಆರೋಪಿಸಿದರು.
ಈ ಜಿಲ್ಲೆಯ ಎಲ್ಲಾ ಸರ್ಕಾರಿ ಸ್ಥಳಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಡ್ರಗ್ಸ್ ದಂಧೆಯಲ್ಲಿ ಕಾಂಗ್ರೆಸ್ ಮಾಜಿ ಮೇಯರ್ ಪುತ್ರನೇ ಸಿಕ್ಕಿಹಾಕಿಕೊಂಡಿದ್ದ. ನಿಮ್ಮ ಅಧಿಕಾರದಲ್ಲಿ ಇಷ್ಟೊಂದು ಅವ್ಯವಹಾರ ನಡೆಸಿರುವ ನೀವು ನಮಗೆ ಬುದ್ಧಿವಾದ ಹೇಳುವ ಅಗತ್ಯವಿಲ್ಲ. ನಮ್ಮ ಸರ್ಕಾರ ಬಂದು ಒಂದು ವರ್ಷವಾಗಿದ್ದು, ಅದ್ಭುತ ಪರಿವರ್ತನೆಗಳಾಗಿವೆ. ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಹಿಂದೂ-ಮುಸ್ಲಿಂ ಗಲಭೆಗಳಾಗಿಲ್ಲ. ಸಿಎಎ ಗಲಭೆಯನ್ನು ತಕ್ಷಣ ಒಂದೇ ಗಂಟೆಯಲ್ಲಿ ನಿಲ್ಲಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವಾಗ ಎಷ್ಟೊಂದು ಗಲಭೆ, ಹತ್ಯೆ, ಹಲ್ಲೆ, ದರೋಡೆ, ಅವ್ಯವಹಾರ, ಗೋಕಳ್ಳತನ ಆಗಿದೆ ಎಂಬುದರ ಬಗ್ಗೆ ಅಂಕಿ ಅಂಶವಿದೆ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸುವೆ ಎಂದು ಸವಾಲು ಹಾಕಿದರು.
ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ 250ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಈ ಸಂದರ್ಭ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಡಾ.ಶರತ್ ಮತ್ತಿತರರು ಉಪಸ್ಥಿತರಿದ್ದರು.