ಮಂಗಳೂರು: ಸಾಕಷ್ಟು ಮಂದಿ ವೆಂಟಿಲೇಟರ್‌ಗಳನ್ನು ಉಚಿತವಾಗಿ ಕೊಡಲು ತಯಾರಿದ್ದರೂ, ಅದನ್ನು ತಂದು ಆಸ್ಪತ್ರೆಗೆ ಅಳವಡಿಸುವ ಕೆಲಸ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಆಗುತ್ತಿಲ್ಲ. ಆದ್ದರಿಂದ ತಕ್ಷಣವೇ ವೆಂಟಿಲೇಟರ್ ವ್ಯವಸ್ಥೆಯಾಗಲಿ ಎಂದು ವಿಧಾನ ಪರಿಷತ್ ಮಾಜಿ ಶಾಸಕ ಐವನ್ ಡಿಸೋಜ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗ ಕೋವಿಡ್-19 ಸಹಾಯವಾಣಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿದೆ. ಸಾವಿರ ಬೆಡ್‌ಗಳಿರುವ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಕೇವಲ ಆರು ವೆಂಟಿಲೇಟರ್‌ಗಳು ಮಾತ್ರ ಇವೆ. ವೆನ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಒಂದು ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿರುವ ಸೋಂಕಿತರನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸುವ ಸಂದರ್ಭ ಅಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲೇಬೇಕು. ಆದರೆ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಪ್ರಾಣಬಿಟ್ಟ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ವ್ಯಕ್ತಿಗೆ ಕೋವಿಡ್ ಸೋಂಕು ದೃಢಗೊಂಡರೆ, ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಖಾಸಗಿ ಆ್ಯಂಬುಲೆನ್ಸ್ ಗಳನ್ನೇ ಅವಲಂಬಿಸುವ ಪರಿಸ್ಥಿತಿ ಎದುರಾಗುತ್ತಿದೆ. ಅವರು ಪಿಪಿಇ ಕಿಟ್, ಸ್ಯಾನಿಟೈಸೇಷನ್ ಖರ್ಚು ವೆಚ್ಚ ಎಂದು 10-15 ಕಿ.ಮೀ.ಗೆ 2,000-3,000 ಸಾವಿರ ರೂ. ಹಣ ಪಡೆದುಕೊಳ್ಳತ್ತಾರೆ. ಇದರಿಂದ ಬಡವರಿಗೆ ಬಹಳಷ್ಟು ತೊಂದರೆಗಳಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಕನಿಷ್ಠ 50 ಆ್ಯಂಬುಲೆನ್ಸ್‌ಗಳ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಮಾಡಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.
ಅದೇ ರೀತಿ ನಗರ ಪಾಲಿಕೆಯಲ್ಲಿ ಹಿಂದೆ ಒಂದು ಆ್ಯಂಬುಲೆನ್ಸ್ ಇತ್ತು. ಈಗ ಅದೂ ಇಲ್ಲ. ಕೋವಿಡ್ ಸಂದರ್ಭದಲ್ಲಿ ಬರೀ ಟೆಂಡರ್ ಕರೆಯುತ್ತಾ ಕುಳಿತರೇ ಆಗುತ್ತದೆಯೇ?. ಆ್ಯಂಬುಲೆನ್ಸ್ ಮಾರುಕಟ್ಟೆ ಬೆಲೆ ಏನು? ಎಂದು ಖಚಿತಪಡಿಸಿ ತಕ್ಷಣ 10 ಆ್ಯಂಬುಲೆನ್ಸ್‌ಗಳನ್ನು ಮಹಾನಗರ ಪಾಲಿಕೆಯಲ್ಲಿ ತಯಾರಿಡಲಿ. ಅಲ್ಲದೇ ಇತರ ರೋಗಗಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದವರಿಗೆ ಕೋವಿಡ್ ಸೋಂಕು ದೃಢಗೊಂಡಲ್ಲಿ ಅವರಿಗೆ ಹಿಂದಿನ ಬಿಲ್ ಕಟ್ಟದೆ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಡಿಸ್ಚಾರ್ಜ್ ಮಾಡುವುದಿಲ್ಲ. ಆದ್ದರಿಂದ ರೋಗಿಯು ಬಿಪಿಎಲ್ ಕಾರ್ಡ್‌ದಾರರಾಗಿದ್ದಲ್ಲಿ ಅವರಿಗೆ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡುವಂತೆ ಸರ್ಕಾರ ತಕ್ಷಣ ಆದೇಶ ನೀಡಬೇಕು. ಆದ್ದರಿಂದ ಸರ್ಕಾರ ಎಷ್ಟು ಸಾಧ್ಯವಿದೆಯೋ ಅಷ್ಟು ಉತ್ತಮ ಚಿಕಿತ್ಸೆ ನೀಡಬೇಕು ಎಂಬುದು ನಮ್ಮ ಕೋವಿಡ್-19 ಸಹಾಯವಾಣಿಯ ಅಭಿಪ್ರಾಯ ಎಂದು ಐವನ್ ಡಿಸೋಜ ಹೇಳಿದರು.