ಮಂಗಳೂರು: ಅಜ್ಜಿ ಮನೆ ಎಂಬ ವಾತಾವರಣದ ಕಲ್ಪನೆಯಲ್ಲಿ ಮಕ್ಕಳಿಗೆ ಆಟ ಪಾಠದಲ್ಲಿ ಓದುವ ಆಸಕ್ತಿಯು ಕೂಡಾ ಹೆಚ್ಚಾಗುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ. ಭರತ್ ಶೆಟ್ಟಿ ನುಡಿದರು.
ಇಲ್ಲಿನ ಕಾಟಿಪಳ್ಳ 3ನೇ ವಾರ್ಡ್ನಲ್ಲಿ ಒಎನ್ಜಿಸಿ ಎಂಆರ್ಪಿಎಲ್ (ಸಿಎಸ್ಆರ್) ನಿಧಿಯಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಜ್ಜಿ ಮನೆ ಕಾಟಿಪಳ್ಳ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಕಾರ್ಯಕರ್ತೆಯರ ಮೂಲಕ ನಡೆಸಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಗರ್ಭಿಣಿ, ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯ ಮೂಲಕ ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಎಂಆರ್ಪಿಎಲ್ ಸ೦ಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 10 ಕೋಟಿ ಮೀಸಲಿರಿಸಿದೆ. ಪ್ರಸ್ತುತ 5 ಕೋಟಿ ವೆಚ್ಚದ ಕೆಲಸ ಕಾರ್ಯವನ್ನು ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ ವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಮಹಾಪೌರ ದಿವಾಕರ್ ಪಾಂಡೇಶ್ವರ, ಉಪಮಹಾಪೌರ ವೇದಾವತಿ ಕುಳಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಮಾಜಿ ಮನಪಾ ಸದಸ್ಯ ಬಶೀರ್ ಅಹಮ್ಮದ್, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಬಾಲವಿಕಾಸ ಸಮಿತಿ ಸದಸ್ಯೆ ಸುಜಾತ, ಎಂಆರ್ಪಿಎಲ್ ಸಿಎಸ್ಆರ್ ವೀಣಾ, ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರ ಎನ್ಐಟಿಕೆ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಜಿಲ್ಲಾ ನಿರೂಪಣಾಧಿಕಾರಿ ಶ್ಯಾಮಲಾ, ಸಮಾಜ ಸೇವಕ ಕೂಸಪ್ಪ ಶೆಟ್ಟಿಗಾರ್, ನಿರ್ಮಿತಿ ಕೇಂದ್ರ ಇಂಜಿನಿಯರ್ ನಮಿತ್, ಭರತ್ ಇದ್ದರು.