ಮಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ರಾಜಕೀಯವಾಗಿ ನೈತಿಕತೆ, ಸಿದ್ಧಾಂತ ಏನೂ ಇಲ್ಲ. ಅವರ ಪಕ್ಷ ಜೋಕರ್ ತರಹ ಒಂದು ಬಾರಿ ಬಿಜೆಪಿ, ಒಂದು ಬಾರಿ ಕಾಂಗ್ರೆಸ್ ಜೊತೆ ಹೊಂದಾಣಿಕೆಯಾಗುತ್ತದೆ. ಅವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಅವರ ಉಡಾಫೆ, ಉದಾಸೀನ ಹಾಗೂ ಸಿಎಂ ಸ್ಥಾನದ ಗಾಂಭೀರ್ಯ ಬಿಟ್ಟು ಕಾಲ ಕಳೆದು ಬಿಟ್ಟರು. ಇಂದು ಅವರು ಅಧಿಕಾರ ಕಳೆದು ಬಿಜೆಪಿ ಪಕ್ಷ ಅಧಿಕಾರದಲ್ಲಿರುವಾಗ ಅವರಿಗೆ ಬಹಳ ಆತಂಕ ಕಾಡುತ್ತಿದೆ. ಹಾಗಾಗಿ, ಅವರು ದಿನ ಬೆಳಗ್ಗೆ ಎದ್ದು ಕ್ಷೇತ್ರಗಳ ಕಡೆಗೆ ಸಂಚಾರ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.
ಓದಿ: 6ನೇ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಹೋರಾಟ: ಫ್ರೀಡಂ ಪಾರ್ಕ್ನಲ್ಲಿ ಮುಂದುವರಿದ ಧರಣಿ
ಅಧಿಕಾರವಿದ್ದಾಗ ಜನರ ಬಳಿಗೆ ಹೋಗದೆ, ಅಧಿಕಾರ ಇಲ್ಲದಿರುವಾಗ ಜನರ ಬಳಿಗೆ ಹೋಗಿ ಗೋಳಾಡೋದು, ಕಣ್ಣೀರು ಸುರಿಸುವುದು ಕುಮಾರಸ್ವಾಮಿಯವರಿಗೆ ಮೊದಲಿಂದ ಬಂದಿರುವಂತಹ ಗುಣ. ಹಾಗಾಗಿ, ಮುಂದಿನ 2023ರ ಚುನಾವಣೆಯಲ್ಲಿ ನೂರಕ್ಕೆ ನೂರು ಪ್ರತಿಶತ ಹಳೆ ಮೈಸೂರು ಕಡೆಗಳಲ್ಲಿ ಬಿಜೆಪಿ ಪಕ್ಷದ ಬಹುಪಾಲು ಶಾಸಕರು ಆಯ್ಕೆಯಾಗಿ ಬರುತ್ತಾರೆ.
ಜೆಡಿಎಸ್ ಸಂಪೂರ್ಣ ನೆಲ ಕಚ್ಚಲಿದೆ. ಅದು ಕುಮಾರಸ್ವಾಮಿಯವರನ್ನು ಕಾಡುತ್ತಿದೆ. ಹಾಗಾಗಿ, ಅವರು ಪ್ರವಾಸ ಮಾಡುತ್ತಿದ್ದಾರೆ ಎಂದರು.