ಚೆನ್ನೈ(ತಮಿಳುನಾಡು): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಭಾಗವಾಗಿ ಕರ್ನಾಟಕ ಪೊಲೀಸರ ವಿಶೇಷ ತಂಡ ತಮಿಳುನಾಡಿನ ಹಲವು ಸ್ಥಳಗಳಲ್ಲಿ ಇಂದು ಶೋಧ ಕಾರ್ಯಾಚರಣೆ ನಡೆಸಿದೆ. ಅಲ್ಲದೇ, ಹಲವು ಶಂಕಿತ ವ್ಯಕ್ತಿಗಳಿಗೆ ಸಮನ್ಸ್ ನೀಡಿದೆ. ಶಂಕಿತ ಉಗ್ರ ಮೊಹಮ್ಮದ್ ಶಾರಿಕ್ ಪ್ರಯಾಣದ ಜಾಡು ಪತ್ತೆ ಮಾಡಲಾಗುತ್ತಿದೆ.
ಸ್ಫೋಟಕ್ಕೂ ಮೊದಲು ಶಾರಿಕ್ ತಂಗಿದ್ದ ಕೊಯಮತ್ತೂರಿನ ಭವನದ ಮಾಲೀಕ ಕಾಮರಾಜುಗೆ ಸಮನ್ಸ್ ನೀಡಲಾಗಿದೆ. ಶಾರಿಕ್ ನಕಲಿ ಗುರುತನ್ನು ಬಳಸಿ ಭವನದಲ್ಲಿ ತಂಗಿರುವುದು ತಿಳಿದುಬಂದಿದೆ. ಹೀಗಾಗಿ ಮೂರು ದಿನಗಳ ಒಳಗೆ ಮಂಗಳೂರು ಪೊಲೀಸರ ಮುಂದೆ ಭವನದ ಮಾಲೀಕರು ವಿಚಾರಣೆಗೆ ಹಾಜರಾಗಲು ಸೂಚಿಸಿ ಸಮನ್ಸ್ ಜಾರಿ ಮಾಡಲಾಗಿದೆ.
ಮಧುರೈನ ನೇತಾಜಿ ರಸ್ತೆಯಲ್ಲಿರುವ ಲಾಡ್ಜ್‌ನ ಮ್ಯಾನೇಜರ್‌ನನ್ನೂ ಪೊಲೀಸರು ಈ ವೇಳೆ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದ್ದು, ಲಾಡ್ಜ್ನಲ್ಲಿ ಉಳಿದು ಕರೆ ಮಾಡಿರುವುದು ದೃಢಪಟ್ಟಿದೆ.
ತಮಿಳು ಪೊಲೀಸರ ಸಾಥ್: ಉಗ್ರ ಶಾರಿಕ್ ಚಲನವಲನಗಳ ಮೇಲೆ ದಾಳಿ ನಡೆಸುತ್ತಿರುವ ಕರ್ನಾಟಕ ವಿಶೇಷ ಪೊಲೀಸ್ ದಳಕ್ಕೆ ತಮಿಳುನಾಡು ಪೊಲೀಸರು ಸಾಥ್ ನೀಡಿದ್ದಾರೆ. ಮಧುರೈ ಮತ್ತು ನಾಗರಕೊಯ್ಲಿಯಲ್ಲಿ ಹಲವರನ್ನು ವಿಚಾರಣೆ ನಡೆಸಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಅಸ್ಸೋಮಿ ವಲಸೆ ಕಾರ್ಮಿಕನ ಮೊಬೈಲ್ ಬಳಸಿ ಕರೆ ಮಾಡಿದ್ದು, ಈ ಬಗ್ಗೆಯೂ ವಿಚಾರಣೆ ಮಾಡಲಾಗಿದೆ.
ಡಿಪಿಯಾಗಿ ಆದಿಯೋಗಿ ಚಿತ್ರವೇಕೆ?: ಕೊಯಮತ್ತೂರಿನ ಆದಿಯೋಗಿ ಶಿವನ ಚಿತ್ರವನ್ನು ಉಗ್ರ ಶಾರಿಕ್ ವಾಟ್ಸಾಪ್ನ ಡಿಪಿಯಾಗಿ ಇಟ್ಟುಕೊಂಡಿದ್ದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ದಾರಿ ತಪ್ಪಿಸಲು ಅಥವಾ ದೇವಾಲಯವನ್ನು ಟಾರ್ಗೆಟ್ ಮಾಡಲಾಗಿತ್ತೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಓದಿ: ಕುಕ್ಕರ್ ಬಾಂಬರ್ ಶಾರೀಕ್ ಟ್ರಾವೆಲ್ ಹಿಸ್ಟರಿ ಕಲೆಹಾಕುತ್ತಿರುವ ಪೊಲೀಸರು