ಮಂಗಳೂರು: ಅಪರಿಚಿತನೋರ್ವ ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿದ ಬಳಿಕ ಬ್ಯಾಂಕ್ ಖಾತೆಯಿಂದ 45 ಸಾವಿರ ರೂಪಾಯಿ ಕಟ್ ಆಗಿದೆ ಎಂದು ವ್ಯಕ್ತಿಯೊಬ್ಬ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
ನಗರದ ಮಲ್ಲಿಕಟ್ಟೆ ಬ್ರ್ಯಾಂಚ್ನ ಎಸ್ಬಿಐ ಖಾತೆದಾರನೊಬ್ಬನಿಗೆ ಜೂನ್ 12 ರ ಬೆಳಗ್ಗೆ 11.40 ಕ್ಕೆ ಅಪರಿಚಿತ ವ್ಯಕ್ತಿ ಬ್ಯಾಕ್ ಸಿಬ್ಬಂದಿಯೆಂದು ಕರೆ ಮಾಡಿದ್ದಾನೆ. 9874361421 ನಂಬರ್ನಿಂದ ಕರೆ ಮಾಡಿ, ಎಸ್ಬಿಐನಿಂದ ಮಾತಾಡುತ್ತಿದ್ದೇನೆ. ಕೆವೈಸಿ ಬಗ್ಗೆ ಮಾಹಿತಿ ಬೇಕಿತ್ತು ಎಂದು ಕೇಳಿದ್ದಾನೆ. ಪ್ರತಿಕ್ರಿಯಿಸದಿದ್ದಕ್ಕೆ ಮತ್ತೆ ನಾವು ಕೆವೈಸಿ ವಿಭಾಗದಿಂದ ಮಾತಾಡುತ್ತಿದ್ದೇವೆ ಎಂದು ಜೋರಾಗಿ ಮಾತಾಡಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿ ಇದೊಂದು ಫ್ರಾಡ್ ಕರೆ ಇರಬೇಕೆಂದು ಭಾವಿಸಿ, ಕಾಲ್ ಕಟ್ ಮಾಡಿದ್ದಾರೆ. ಕೂಡಲೇ ಬ್ಯಾಂಕ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಆದರೆ, ಇತ್ತೀಚಿಗೆ ವ್ಯಕ್ತಿ ಅಕೌಂಟ್ ಪರಿಶೀಲಿಸಿರಲಿಲ್ಲ. ತಡವಾಗಿ ಚೆಕ್ ಮಾಡಿದಾಗ ಹಂತಹಂತವಾಗಿ ವ್ಯಕ್ತಿಯ ಖಾತೆಯಿಂದ 45 ಸಾವಿರ ರೂ.ಕಡಿತವಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.