ಮಂಗಳೂರು: ದಿಢೀರ್ ಕಾರ್ಯಾಚರಣೆಗಿಳಿದ ಮಂಗಳೂರು ಮನಪಾ ಕಂದಾಯ ಇಲಾಖೆಯ ಡೆಪ್ಯುಟಿ ಕಮಿಷನರ್ ಬಿನಾಯ್ ನೇತೃತ್ವದ ತಂಡ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದೆ.
ರಾಜ್ಯ ಸರ್ಕಾರದ ಕೋವಿಡ್ ಮುಂಜಾಗ್ರತಾ ಪರಿಷ್ಕೃತ ನೀತಿ ಜಾರಿಗೆ ಬಂದ ಹಿನ್ನೆಲೆಯಲ್ಲಿ, ಇಂದು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಮೇ 4ರವರೆಗೆ ಬಂದ್ ಮಾಡುವಂತೆ ಸೂಚನೆ ನೀಡಿದೆ.
ಹೋಟೆಲ್, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ ಬಟ್ಟೆಶಾಪ್, ಸ್ಟೀಲ್ ಪಾತ್ರೆಗಳು ಇನ್ನಿತರ ಎಲ್ಲ ಮಳಿಗೆಗಳನ್ನು ಬಂದ್ ಮಾಡಿಸಿದ್ದಾರೆ.
ಸಂಜೆ ಸುಮಾರು 4 ಗಂಟೆ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ನಗರದ ಸೆಂಟ್ರಲ್ ಮಾರುಕಟ್ಟೆಯಿಂದ ಆರಂಭಿಸಿ ನಗರದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.
ಜೊತೆಗೆ ಫುಟ್ಪಾತ್ ಗಳಲ್ಲಿ ಇಟ್ಟು ವ್ಯಾಪಾರ ಮಾಡುವ ಅಂಗಡಿಗಳ ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಮನಪಾ ಅಧಿಕಾರಿಗಳು ನೀಡಿದರು.
ಮನಪಾ ಅಧಿಕಾರಿಗಳ ಮನವಿಯಂತೆ ಬಂದ್ ಮಾಡದ ಅಂಗಡಿ ಮುಂಗಟ್ಟುಗಳನ್ನು ಪೊಲೀಸ್ ಬಲ ಪ್ರಯೋಗಿಸಿ ಬಂದ್ ಮಾಡಲಾಯಿತು.