ಮಂಗಳೂರು: ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ನೀರಿನ ದರ ಹಾಗೂ ಘನತ್ಯಾಜ್ಯ ದರವನ್ನು ಪಾಲಿಕೆಯ ಪರಿಷತ್ತಿನಲ್ಲಿ ಕಾರ್ಯಸೂಚಿ ಮಂಡಿಸಿ ಕ್ರಮಕೈಗೊಳ್ಳಲಾಗಿದೆ. ಮುಂದಿನ ತಿಂಗಳಿಂದಲೇ ಪರಿಷ್ಕೃತ ನೀರಿನ ದರದ ಅನ್ವಯದಂತೆ ವಸೂಲಿ ಮಾಡಲಾಗುತ್ತದೆ ಎಂದು ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಹೇಳಿದರು.
ಮಂಗಳೂರು ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಪರಿಷ್ಕೃತ ಗೊಂಡಿರುವ ನೀರಿನ ದರ 0-10 ಕಿ.ಲೀ.ಗೆ 6 ರೂ., 10-15 ಕಿ.ಲೀ.ಗೆ 7 ರೂ., 15-25 ಕಿ.ಲೀ.ಗೆ 9 ರೂ., 25-30 ಕಿ.ಲೀ.ಗೆ 11 ರೂ., 30 ಕಿ.ಲೀ.ಗಿಂತ ಅಧಿಕವಾದಲ್ಲಿ 130 ರೂ. ನಂತೆ ದರ ನಿಗದಿಯಾಗಿದೆ ಎಂದು ಹೇಳಿದರು.
ಘನತ್ಯಾಜ್ಯ ವಿಲೇವಾರಿಯ ದರವೂ ಪರಿಷ್ಕರಣೆಯಾಗಿದ್ದು, 500ಚದರ ಅಡಿಗೆ 30 ರೂ., 501-1000 ಚ. ಅಡಿಗೆ 60, 1001-1500 ಚ. ಅಡಿಗೆ 80 ರೂ. ದರ ನಿಗದಿಯಾಗಿದೆ. ಉದ್ದಿಮೆಗಳ ಮೇಲೆ ವಿಧಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಶುಲ್ಕದಲ್ಲಿ 5000 ಚ.ಅಡಿ ಮೇಲ್ಪಟ್ಟು ವಿಧಿಸಲಾಗಿರುವ ಶುಲ್ಕವನ್ನು 1000 ಚ.ಅಡಿಯಿಂದ 3000 ಚ.ಅಡಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಮನಪಾ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಯಾವುದೇ ಬಜೆಟ್ ಮಂಡಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಪಾಲಿಕೆಯ ಪರಿಷತ್ ನಲ್ಲಿ ಪಾಲಿಕೆಯ ಎಲ್ಲಾ 60 ಸದಸ್ಯರಿಗೂ 25 ಲಕ್ಷ ರೂ.ನಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 15 ಲಕ್ಷ ರೂ. ನಿರ್ಮಾಣ ಕಾಮಗಾರಿಗಳಿಗೆ ಹಾಗೂ 10 ಲಕ್ಷ ರೂ. ವಿದ್ಯುತ್, ಯುಜಿಡಿ ಹಾಗೂ ಇನ್ನಿತರ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳನ್ನು ತೆರವುಗೊಳಿಸುವಂತೆ ಈಗಾಗಲೇ ಆದೇಶಿಸಲಾಗಿದ್ದು, ಇನ್ನೂ ತೆಗೆಯದ ಬ್ಯಾನರ್, ಫ್ಲೆಕ್ಸ್ ಗಳನ್ನು ಮನಪಾ ವತಿಯಿಂದ ತೆರವುಗೊಳಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕುವ ಮೊದಲು ಪಾಲಿಕೆಯ ಪರವಾನಿಗೆ ಪಡೆದುಕೊಳ್ಳಬೇಕು ಎಂದು ಮೇಯರ್ ಅವರು ಆದೇಶಿಸಿದರು.
ಮಂಗಳೂರು ಮನಪಾದಲ್ಲಿ ಕಂದಾಯ ಪಾವತಿಯಾಗುತ್ತಿಲ್ಲ. ಆದ್ದರಿಂದ ಇನ್ನೂ ಆಸ್ತಿ ತೆರಿಗೆ ಹಾಗೂ ನೀರಿನ ತೆರಿಗೆ ಪಾವತಿ ಮಾಡದವರು ಶೀಘ್ರದಲ್ಲೇ ಪಾವತಿ ಮಾಡಬೇಕು. ಮುಂದಿನ ತಿಂಗಳಿನಿಂದ ದಂಡ ವಿಧಿಸಿ ಪಾವತಿ ಮಾಡಬೇಕಾಗುತ್ತದೆ. ನೀರಿನ ದರದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಿಂಗಳಿಗೆ ಒಂದು ಬಾರಿ ನೀರಿನ ಅದಾಲತ್ ಮಾಡಲಾಗುತ್ತದೆ. ಸುರತ್ಕಲ್, ಮಂಗಳೂರು ಹಾಗೂ ಕದ್ರಿ ಮೂರು ಝೋನಲ್ ಗಳಲ್ಲಿ ತಿಂಗಳಿಗೆ ಒಂದೊಂದು ದಿನ ಅದಾಲತ್ ಮಾಡಿ ಅಲ್ಲಿಯೇ ನೀರಿನ ದರದ ಪರಿಶೀಲನೆ ನಡೆಸಿ, ಪರಿಹಾರ ಮಾಡಲಾಗುತ್ತದೆ ಎಂದು ಮೇಯರ್ ಹೇಳಿದರು.
ಹೈಕೋರ್ಟ್ ಆದೇಶ ಬಂದಂತೆ ಜಿಲ್ಲಾಧಿಕಾರಿಯವರು ಮೊನ್ನೆ ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಅದರ ಮೇಲೆ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ತಡೆಯನ್ನು ತಂದಿದ್ದಾರೆ. ಈಗಾಗಲೇ ವ್ಯಾಪಾರಿಗಳಿಗೆ ಯಾವುದೆಲ್ಲಾ ದಾಖಲೆಪತ್ರಗಳಿವೆ ಅದನ್ನು ಮನಪಾಕ್ಕೆ ನೀಡಬೇಕು. ಅವರ ಟ್ರೇಡ್ ಲೈಸೆನ್ಸ್ ನೋಡಿ ಅವರಿಗೆ ಅನುಮತಿ ನೀಡವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ದಿವಾಕರ ಪಾಂಡೇಶ್ವರ ಹೇಳಿದರು.
ಲೇಡಿಹಿಲ್ ವೃತ್ತ ನೂತನವಾಗಿ ನಿರ್ಮಾಣವಾಗುತ್ತಿದ್ದು, ಅದಕ್ಕೆ ಮುಂದಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಮರುನಾಮಕರಣ ಮಾಡಬೇಕು ಎಂದು ಸಾಕಷ್ಟು ಮನವಿಗಳು ಬಂದಿವೆ. ಮುಂದೆ ನಮ್ಮ ಪಾಲಿಕೆಯ ಸಮಿತಿಯಲ್ಲಿ ಚರ್ಚಿಸಿ ಬಳಿಕ ಅಲ್ಲಿನ ನಿರ್ಧಾರವನ್ನು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ. ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ಎಂಬ ಮರುನಾಮಕರಣವನ್ನು ನಾವು ತರಾತುರಿಯಲ್ಲಿ ಎಲ್ಲೂ ಮಾಡಿಲ್ಲ. ಸರಕಾರದ ಆದೇಶದಂತೆಯೇ ಎಲ್ಲಾ ನಡೆದಿದೆ ಎಂದು ದಿವಾಕರ ಪಾಂಡೇಶ್ವರ ಹೇಳಿದರು.
ಈ ಸಂದರ್ಭ ಉಪ ಮೇಯರ್ ವೇದಾವತಿ ಪಾಲಿಕೆಯ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸ್ಥಾಯಿ ಸಮಿತಿಯ ಸದಸ್ಯರಾದ ಪೂರ್ಣಿಮಾ, ಕಿರಣ್ ಕುಮಾರ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.