ಮಂಗಳೂರು: ಈ ಬಾರಿಯೂ ಮಂಗಳೂರು ದಸರಾ ವೀಕ್ಷಣೆಗೆ ಆಡಳಿತ ಸಮಿತಿಯು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಆಗಮಿಸುತ್ತಾರೆ ಎಂಬ ಭರವಸೆಯಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಶಿಸ್ತುಬದ್ಧವಾಗಿ ನಮ್ಮ ದಸರಾ ನಮ್ಮ ಸುರಕ್ಷೆ ಎಂಬ ಕಲ್ಪನೆಯಲ್ಲಿ ಮಂಗಳೂರು ದಸರಾವನ್ನು ನಡೆಸಲಾಗುತ್ತದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ಕೋಶಾಧಿಕಾರಿ, ನ್ಯಾಯವಾದಿ ಪದ್ಮರಾಜ್ ಆರ್. ತಿಳಿಸಿದರು.
ಜನರನ್ನು ಇನ್ನೂ ಮನೆಯೊಳಗಡೆ ಕೂರಿಸಿದ್ದಲ್ಲಿ ಕೊರೊನಾ ಸೋಂಕಿಗಿಂತ ಹೆಚ್ಚಿನ ತೊಂದರೆ ಸಂಭವಿಸಿ ಮಾನಸಿಕ ಖಿನ್ನತೆಗೊಳಗಾಗುತ್ತಾರೆ. ಜನರು ಇದರಿಂದ ಹೊರಬರಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಕೊರೊನಾದೊಂದಿಗೆ ಬದುಕಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜನರನ್ನು ಮಾನಸಿಕ ಒತ್ತಡದಿಂದ ಪಾರು ಮಾಡುವ ಕಾರ್ಯ ಕುದ್ರೋಳಿ ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರುಗಳಿಂದ ಆಗುತ್ತದೆ ಎಂಬ ವಿಶ್ವಾಸದಿಂದ ಮಂಗಳೂರು ದಸರಾವನ್ನು ಯಾರಿಗೂ ತೊಂದರೆಯಾಗದಂತೆ ಮಾಡಲಿದ್ದೇವೆ ಎಂದು ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳದಿಂದ ಆಯೋಜನೆಗೊಳ್ಳುವ ಮಂಗಳೂರು ದಸರಾ ಸರಕಾರದ ಅನುದಾನವನ್ನು ಬಳಸಿ ಆಗುವ ದಸರಾವಲ್ಲ. ಇದು ಕ್ಷೇತ್ರದ ಭಕ್ತರ ಸಹಕಾರದಿಂದ ನಡೆಯುವ ಜನರ ದಸರಾ. ಕೊರೊನಾ ಸಂಕಷ್ಟಕ್ಕಿಂತಲೂ ಲಾಕ್ಡೌನ್ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾದವರು ಬಹಳಷ್ಟು ಮಂದಿ ಇದ್ದಾರೆ. ಆದ್ದರಿಂದ ಜನರನ್ನು ಆರ್ಥಿಕ ಪುನಶ್ಚೇತನಗೊಳಿಸುವ, ಮಾನಸಿಕ ಖಿನ್ನತೆಯಿಂದ ಅವರನ್ನು ಹೊರತಂದು ಆತ್ಮಸ್ಥೈರ್ಯ ತುಂಬಿಸುವ ಕಾರ್ಯ ಮಂಗಳೂರು ದಸರಾ ಮೂಲಕ ನಡೆಯಲಿದೆ ಎಂದು ಪದ್ಮರಾಜ್ ಆರ್. ಹೇಳಿದರು.
ಭಕ್ತಾದಿಗಳಲ್ಲಿ ನಮ್ಮ ವಿನಂತಿಯೇನೆಂದರೆ ಆರು ವರ್ಷಕ್ಕಿಂತ ಸಣ್ಣ ಮಕ್ಕಳು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರನ್ನು ಮಂಗಳೂರು ದಸರಾ ಸಂದರ್ಭ ದೇವಳಕ್ಕೆ ಕರೆತರುವುದು ಬೇಡ. ಅವರಿಗಾಗಿ ದಸರಾ ಸಂದರ್ಭದಲ್ಲಿ ನಡೆಯುವ ಪೂಜೆ-ಪುನಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ದೇವಸ್ಥಾನದ ವತಿಯಿಂದ ಲೈವ್ ವ್ಯವಸ್ಥೆ ಏರ್ಪಡಿಸಲಾಗುತ್ತದೆ. ಸರಕಾರದ ಮಾರ್ಗಸೂಚಿಗಳಿಗೆ ತೊಂದರೆಯಾಗಬಾರದೆಂದು ಈ ಬಾರಿ 200 ಮಂದಿ ಸ್ವಯಂಸೇವಕರನ್ನು ನೇಮಕ ಮಾಡಲಾಗಿದ್ದು, ಇವರು ಬರುವ ಭಕ್ತಾದಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಸರ್, ಮಾಸ್ಕ್ ಧರಿಸಲು ಸೂಕ್ತ ಸಲಹೆ ಸೂಚನೆಯನ್ನು ನೀಡಲಿದ್ದಾರೆ ಎಂದು ಹೇಳಿದರು.