ಮಂಗಳೂರು: ಸರ್ಕಾರದ ನಿಯಮದಂತೆ ಕೊರೊನಾ ಸೋಂಕಿತರಿಗೆ ದಿನವೊಂದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 12 ಸಾವಿರ ರೂ. ನಿಗದಿ ಪಡಿಸಲಾಗಿದೆ. ಆದರೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ 11 ದಿನಗಳ ಕಾಲ ದಾಖಲಾದ ಸೋಂಕಿತರೋರ್ವರಿಗೆ 2.97,518 ರೂ. ಬಿಲ್ ನೀಡಿದೆ. ಸರ್ಕಾರದ ನಿಯಮವನ್ನೂ ಮೀರಿ ಖಾಸಗಿಗಳು ಸೋಂಕಿತರ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ಯಾರನ್ನೂ ಕ್ಯಾರೇ ಮಾಡುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಸೋಂಕಿತರೋರ್ವರು ನಗರದ ಯುನಿಟಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ 11 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಇವರಿಗೆ ಸಣ್ಣ ಮಟ್ಟಿನ ನ್ಯುಮೋನಿಯಾ ಹಾಗೂ ರಕ್ತದಲ್ಲಿ ಆಮ್ಲಜನಕದ ಪ್ರಮಾಣ 90ಕ್ಕಿಂತ ಕಡಿಮೆಯಾಗಿತ್ತು. ಆದರೆ ಸರ್ಕಾರಿ ನಿಯಮದಂತೆ ಪ್ರತ್ಯೇಕ ಕೊಠಡಿಗೆ ದಿನಕ್ಕೆ 12 ಸಾವಿರ ರೂ. ನಂತೆ 11 ದಿನಕ್ಕೆ 1.32 ಲಕ್ಷ ರೂ. ಆಗಬೇಕಿತ್ತು. ಆದರೆ ಯುನಿಟಿ ಆಸ್ಪತ್ರೆಯಲ್ಲಿ ವಾರ್ಡ್ ಸರ್ವೀಸ್ ಎಂದು 44 ಸಾವಿರ ರೂ., ಲ್ಯಾಬ್ ಚಾರ್ಜ್ 16 ಸಾವಿರ ರೂ., ಎಕ್ಸ್ ರೇ 2.50 ಸಾವಿರ ರೂ., 1.02 ಲಕ್ಷ ರೂ. ದರ ವಿಧಿಸಲಾಗಿದೆ.
![Hospital Bill](https://etvbharatimages.akamaized.net/etvbharat/prod-images/8682019_coronnn.jpg)
ಇಷ್ಟೆಲ್ಲಾ ದರ ವಿಧಿಸಿದ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ಬಹಳ ಉದಾರಿಯಂತೆ ಉಚಿತ ಪಿಪಿಇ ಕಿಟ್ ದರ ಎಂದು 45,110 ರೂ. ರಿಯಾಯಿತಿ ನೀಡಿದೆ. ಕೊರೊನಾ ಸೋಂಕಿತರಿಗಾಗಿಯೇ ಪ್ಯಾಕೇಜ್ ಇರುವಾಗ ಈ ರೀತಿ ದರ ವಿಧಿಸುವುದು ಹೇಗೆ? ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಜನಪ್ರತಿನಿಧಿಗಳು ಯಾರೂ ಮಾತನಾಡುತ್ತಿಲ್ಲ. ಸರ್ಕಾರದ ಆದೇಶವಿದ್ದರೂ ಈ ರೀತಿಯಲ್ಲಿ ದುಬಾರಿ ಬಿಲ್ ವಿಧಿಸುವ ಖಾಸಗಿ ಆಸ್ಪತ್ರೆಗಳ ದಂಧೆಯಿಂದ ಜನ ಸಾಮಾನ್ಯರು ಬದುಕುವುದೇ ದುಸ್ತರವಾಗಿದೆ.