ಮಂಗಳೂರು : ರಾಜ್ಯ ಸರಕಾರದ ವಿವಿಧ ಸಾಕ್ಷ್ಯಚಿತ್ರಗಳು, ಛಾಯಾ ಚಿತ್ರಗಳನ್ನು ಪ್ರದರ್ಶಿಸಲು ರಾಜ್ಯ ಸರಕಾರಿ ಸೇವೆಯಲ್ಲಿರುವ ಸಿನಿ ಚಾಲಕ ಹುದ್ದೆಯನ್ನು ದ.ಕ ಜಿಲ್ಲೆಯಲ್ಲಿ ರದ್ದು ಗೊಳಿಸಲಾಗಿದೆ.
ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಂಗಳೂರು ಕಚೇರಿಯಲ್ಲಿ ಅಸ್ತಿತ್ವದಲ್ಲಿದ್ದ ಸಿನಿಚಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫ್ರಾನ್ಸಿಸ್ ಲೂವಿಸ್ ಅವರು ಅ. 31ರಂದು ಸರಕಾರಿ ಸೇವೆಯಿಂದ ನಿವೃತ್ತರಾಗುವುದರೊಂದಿಗೆ ಜಿಲ್ಲೆಯಲ್ಲಿ ಹುದ್ದೆಯನ್ನು ರದ್ದುಗೊಳಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಾರ್ತಾ ಇಲಾಖೆಯ ಅಧೀನದಲ್ಲಿ ಸಿನಿಚಾಲಕ ಹುದ್ದೆ ಇತ್ತು. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸ್ವಚ್ಚತೆ, ಸಾಮರಸ್ಯಗಳ ಕುರಿತು ಹಾಗೂ ವಿವಿಧ ಸಾಧಕರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗಳನ್ನು, ಜೀವನ ಚಿತ್ರಗಳನ್ನು ಶಾಲಾ ಕಾಲೇಜುಗಳಲ್ಲಿ ಚಿತ್ರಪ್ರದರ್ಶನ, ಧ್ವನಿವರ್ಧಕ, ರೇಡಿಯೋದ ಮೂಲಕ ಸಂದೇಶ ಹರಡುವುದು ಸಿನಿಚಾಲಕನ ಕರ್ತವ್ಯವಾಗಿತ್ತು.
ಆದರೆ ರಾಜ್ಯ ಸರಕಾರದ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನ ಅನ್ವಯ ಸದ್ಯ ಸಿನಿಚಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ನಿವೃತ್ತರಾಗುವುದರೊಂದಿಗೆ ಹುದ್ದೆಯು ತನ್ನಿಂದ ತಾನೇ ಅಸ್ತಿತ್ವ ಕಳೆದುಕೊಳ್ಳಲಿದೆ. ಫ್ರಾನ್ಸಿಸ್ ಲೂವಿಸ್ ಅವರು 1979ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡಿದ್ದು, 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಗುರುವಾರ ನಿವೃತ್ತಿ ಹೊಂದಿದ್ದಾರೆ.