ಮಂಗಳೂರು: ರಾಜ್ಯವನ್ನೇ ತಲ್ಲಣಿಸಿದ್ದ ಉಜಿರೆ ರಥಬೀದಿಯ ಬಾಲಕನ ಅಪಹರಣ ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚಿದ ದ.ಕ.ಜಿಲ್ಲೆಯ ಪೊಲೀಸರಿಗೆ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಘೋಷಣೆ ಮಾಡಿದ್ದಾರೆ.
ಡಿ.17ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ರಥಬೀದಿಯಲ್ಲಿನ ಮನೆಯಿಂದಲೇ 8 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಬಳಿಕ ಮನೆಯವರಿಗೆ 17 ಕೋಟಿ ರೂ. ನಗದು ನೀಡುವಂತೆ ಬೇಡಿಕೆ ಇಡಲಾಗಿತ್ತು. ಪೊಲೀಸರು ಈ ಪ್ರಕರಣವನ್ನು ಬೇಧಿಸಿ ಡಿ.19ರಂದು ಬಾಲಕನ ಅಪಹರಣಕಾರರನ್ನು ಕೋಲಾರದ ಮನೆಯೊಂದರಲ್ಲಿ ಬಂಧಿಸಿ ಬಾಲಕನನ್ನು ಮನೆಯವರಿಗೆ ಸುರಕ್ಷಿತವಾಗಿ ಒಪ್ಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ರಕ್ಷಿಸುವಲ್ಲಿ ಶ್ರಮ ವಹಿಸಿರುವ ದ.ಕ.ಜಿಲ್ಲಾ 26 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರದ ಗೌರವವನ್ನು ಘೋಷಣೆ ಮಾಡಿದ್ದಾರೆ.
ಬೀಟ್ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ನಗದು ಬಹುಮಾನ
ದ.ಕ.ಜಿಲ್ಲೆಯ ವಿವಿಧ ಠಾಣೆಗಳ ಹೊಸ ಬೀಟ್ ಪದ್ಧತಿಯಂತೆ ಬೀಟ್ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಐವರು ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ನಗದು ಬಹುಮಾನ ನೀಡಿ ಗೌರವಿಸುವುದಾಗಿ ಘೋಷಣೆ ಮಾಡಿದ್ದಾರೆ.