ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಹಿಂದೂಗಳು ಹೊರತುಪಡಿಸಿ ಅನ್ಯಧರ್ಮದವರು ವಾಹನಗಳನ್ನು ಪಾರ್ಕಿಂಗ್ ಮಾಡಬಾರದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಆದೇಶ ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಡಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಯನಿರ್ವಹಿಸುತ್ತಿದ್ದು, ಹಿಂದೂಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಮತ್ತು ಅನ್ಯಧರ್ಮದವರಿಗೆ ದೇವಳಕ್ಕೆ ಸೇರಿದ ಜಾಗದಲ್ಲಿ ವಾಹನ ನಿಲ್ಲಿಸಲು ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಮಾಡಿತ್ತು.
ಸಂಘಟನೆಗಳ ಮನವಿ ಆಲಿಸಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ನೇತೃತ್ವದ ತಂಡ, ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವಮಾರು ಗದ್ದೆಯಲ್ಲಿ ಹಿಂದೂಗಳು ಹೊರತುಪಡಿಸಿ ಅನ್ಯಧರ್ಮದವರು ವಾಹನ ಪಾರ್ಕಿಂಗ್ ಮಾಡಬಾರದು. ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಅನ್ಯಧರ್ಮದವರ ವ್ಯಾಪಾರಕ್ಕೂ ನಿರ್ಬಂಧ: ಈ ಹಿಂದೆಯೂ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿತ್ತು. ಆಗಲೂ ಅನ್ಯಧರ್ಮದವರ ವ್ಯಾಪಾರಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಷೇಧಿಸಿತ್ತು.
ಅನ್ಯಧರ್ಮೀಯ ಡಿಸಿ ಹೆಸರು ಹಾಕಿದ್ದ ವಿಚಾರ: ಸದ್ಯ ಈ ಆದೇಶ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಕೆಲ ಹಿಂದೂ ಪರ ಸಂಘಟನೆಗಳು ಸ್ವಾಗತ ಮಾಡಿದರೆ, ಎಡ ಪಂಥೀಯರು ಮಾತ್ರ ಇದು ಅಸಹಿಷ್ಣುತೆಯ ಪರಮಾವಧಿ ಅಂತಾ ಟೀಕೆ ಮಾಡಿದ್ದಾರೆ. ಅಲ್ಲದೆ, ಈ ಹಿಂದೆ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮೀಯ ಜಿಲ್ಲಾಧಿಕಾರಿ ಹೆಸರು ಹಾಕಿದ ವಿಚಾರವೂ ಪುತ್ತೂರಿನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಪಾರ್ಕಿಂಗ್ ಸ್ಥಳದಲ್ಲಿ ಅಸಭ್ಯ ವರ್ತನೆ ಹಿನ್ನೆಲೆ ಈ ನಿರ್ಧಾರ: ದೇವಸ್ಥಾನದ ಆವರಣದಲ್ಲಿ ಅನಧಿಕೃತವಾಗಿ ವಾಹನ ಪಾರ್ಕ್ ಮಾಡುವುದು ಹಾಗೂ ರಾತ್ರಿ ಹೊತ್ತಿನಲ್ಲಿ ಕಾರು ನಿಲ್ಲಿಸಿ ಕಾರಿನೊಳಗೆ ಅಸಭ್ಯವಾಗಿ ನಡೆದುಕೊಳ್ಳುವ ಹಾಗೂ ದೇವಸ್ಥಾನದ ವಠಾರದಲ್ಲಿರುವ ಗೋವುಗಳನ್ನು ಕದಿಯುವ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ದೇವಸ್ಥಾನದ ಎಲ್ಲಾ ಜಾಗಕ್ಕೂ ಆವರಣಗೋಡೆ ಹಾಕುವ ಯೋಜನೆಯನ್ನೂ ಮಾಡಲಾಗಿದೆ.
ಭಕ್ತರಿಗೆ ತೊಂದರೆ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಅನ್ಯಧರ್ಮದವರು ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಿ ಹೋಗುತ್ತಿದ್ದರಿಂದ ದೇವಳಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಈ ಆದೇಶವನ್ನು ಜಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ಸದ್ಯ ಅನ್ಯಧರ್ಮದವರಿಗೆ ಪಾರ್ಕಿಂಗ್ ನಿಷೇಧ ವಿಚಾರ ಚರ್ಚೆಗೆ ಗ್ರಾಸವಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆದೇಶ ಇನ್ಯಾವ ರೂಪವನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.