ಬೆಳ್ತಂಗಡಿ : ಸತ್ಯ, ಆಹಿಂಸೆ, ಕರುಣೆ, ಕ್ಷಮೆ, ಪರೋಪಕಾರ, ದೀನ ದಲಿತರ ಸೇವೆ ಮೊದಲಾದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನ, ವಚನ ಕಾಯಗಳಿಂದ ಪರಿಶುದ್ಧರಾಗಿ ಶ್ರದ್ಧೆ ಭಕ್ತಿಯಿಂದ ನಿತ್ಯವೂ ಧರ್ಮದ ಅನುಷ್ಠಾನ ಮಾಡಬೇಕು. ಆತ್ಮ ಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಪೂಜ್ಯ ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು ಹೇಳಿದರು.
ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಿನ್ನೆ ಮಂಗಲ ಪ್ರವಚನ ನೀಡಿ, ದಯೆ ಇದ್ದಲ್ಲಿ ಧರ್ಮ ಇದೆ, ದಯೆಯೇ ಧರ್ಮದ ಮೂಲವಾಗಿದೆ. ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ನಿತ್ಯ ಮಾಡುತ್ತಿರುವ ಬಹುಮುಖಿ ಸಮಾಜಸೇವೆ ಹಾಗೂ ಧರ್ಮ ಪ್ರಭಾವನಾ ಕಾರ್ಯಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ 1943 ರಲ್ಲಿ ಅತಗೊಂಡರಾಯ ಪಾಟೀಲ್ ಮತ್ತು ರುಕ್ಮಿಣಿ ದಂಪತಿ ಮಗನಾಗಿ ಜನಿಸಿದ ಇವರು,19 ನೇ ವರ್ಷದಲ್ಲಿ ದೀಕ್ಷೆ ಪಡೆದರು. ನಿತ್ಯವೂ ಜಪ, ತಪ, ಧ್ಯಾನದಲ್ಲಿ ನಿರತರಾದ ಪೂಜ್ಯರು 1800 ಬಾರಿ ಉಪವಾಸ ವ್ರತ ಮಾಡಿದ್ದಾರೆ. ಶನಿವಾರ ಧರ್ಮಸ್ಥಳದಿಂದ, ಉಜಿರೆ, ವೇಣೂರು, ಮೂಡಬಿದ್ರೆ, ಶಿರಸಿ ಮೂಲಕ ಪೂಜ್ಯರು ವಿಹಾರ ಮಾಡಲಿದ್ದಾರೆ.