ಬೆಳ್ತಂಗಡಿ(ದಕ್ಷಿಣಕನ್ನಡ): ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಸಮೀಪದ 45 ವರ್ಷ ಹಳೆಯದಾದ ಕುಕ್ಕುಜೆ ಸೇತುವೆ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲಿಸಿದರು.
ಸೇತುವೆ ಕುಸಿತದಿಂದ ಸಂಪರ್ಕ ಕಳೆದುಕೊಂಡಿದ್ದ ಜನರಿಗೆ ತಕ್ಷಣವೇ ತಾತ್ಕಾಲಿಕ ಸೇತುವೆ ನಿರ್ಮಿಸಲು ಗುತ್ತಿಗೆದಾರರಾದ ಮೊಗ್ರೋಡಿ ಕನ್ಸ್ಟ್ರಕ್ಷನ್ ಅವರಿಗೆ ಸೂಚಿಸಿದ್ದು, ಸೇತುವೆ ನಿರ್ಮಾಣಕ್ಕೆ ತಗಲುವ ಸುಮಾರು 5 ರಿಂದ 6.5 ಲಕ್ಷ ರೂಪಾಯಿಯನ್ನ ಹರೀಶ್ ಪೂಂಜ ಅವರೇ ವೈಯುಕ್ತಿಕವಾಗಿ ಭರಿಸಲಿದ್ದಾರೆ. ಬೆಳ್ತಂಗಡಿಯಲ್ಲಿ ಕಳೆದ ಆಗಸ್ಟ್ನಲ್ಲಿ ಬಂದ ನೆರೆ ಸಂದರ್ಭದಲ್ಲಿ ಬಾಂಜಾರು ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಈ ವೇಳೆ ಅತಂತ್ರ ಸ್ಥಿತಿಯಲ್ಲಿದ್ದ ಜನರಿಗೆ ತಕ್ಷಣ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಟ್ಟು ಎಲ್ಲಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದೀಗ ಕುಕ್ಕುಜೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿ ಕೊಡುವ ವ್ಯವಸ್ಥೆ ಮಾಡಿದ್ದಲ್ಲದೆ, ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲು ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಈಶ್ವರಪ್ಪ, ಮಳೆಗಾಲ ಕಳೆದ ಕೂಡಲೇ ಈ ಭಾಗದ ಬಹು ವರ್ಷದ ಸಮಸ್ಯೆಯಾದ ಸೇತುವೆ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣದ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು, ನಾರಾವಿಯ ಉದ್ಯಮಿ ಶ್ರೀನಿವಾಸ್ ಕಿಣಿ ಪ್ರತಿಕ್ರಿಯಿಸಿ,ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ದಿನನಿತ್ಯ ಓಡಾಡಲು ಈ ಸೇತುವೆಯನ್ನ ಅವಲಂಭಿಸಿದ್ದರು. ಮಳೆಗಾಲದ ನಂತರ ಶಾಶ್ವತ ಸೇತುವೆ ಹಾಗೂ ಕಾಂಕ್ರೀಟ್ ರಸ್ತೆಯನ್ನ ನಿರ್ಮಿಸಿಸುವ ಭರವಸೆಯನ್ನ ಶಾಸಕ ಹರೀಶ್ ಪೂಂಜ ನೀಡಿದ್ದಾರೆ. ಹಲವು ವರ್ಷಗಳಿಂದ ಅಭಿವೃದ್ಧಿಯ ಕನಸು ಕಾಣುತ್ತಿದ್ದ ನಮ್ಮ ಗ್ರಾಮದ ಜನತೆಗೆ ಅಭಿವೃದ್ಧಿಯ ಭರವಸೆಯನ್ನ ನೀಡಿದ ಯುವ ಶಾಸಕರಿಗೆ ನಮ್ಮ ಗ್ರಾಮದ ಜನತೆಯ ಪರವಾಗಿ ಅಭಿನಂದಿಸುತ್ತಿದ್ದೇನೆ ಎಂದರು.