ಮಂಗಳೂರು : ಹಲವಾರು ಮಂದಿ ತಮ್ಮ ದೇಶ ಪ್ರೇಮ, ಮಾತೃಭಾಷಾ ಪ್ರೇಮವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಬ್ಬರು ವ್ಯಕ್ತಿಗಳು ತಮ್ಮ ಕನ್ನಡ ಭಾಷಾ ಪ್ರೇಮವನ್ನು ವಿಶಿಷ್ಟ ರೀತಿ ತೋರಿಸಿದ್ದಾರೆ. ಇವರ ಭಾಷಾ ಪ್ರೇಮದ ಮರ್ಮ ಇಲ್ಲಿದೆ ನೋಡಿ.
ಕೆಎಸ್ಆರ್ಟಿಸಿ ಬಸ್ ಚಾಲಕ ಬಸನಗೌಡ ಪೊಲೀಸ್ ಪಾಟೀಲ್ ಹಾಗೂ ನಿರ್ವಾಹಕ ಮಲ್ಲಿಕಾರ್ಜುನ ಇಬ್ಬರೂ ತಾವು ಕೆಲಸ ನಿರ್ವಹಿಸುವ ಬಸ್ ತುಂಬಾ ಕನ್ನಡದ ಧ್ವಜವನ್ನು ರಾರಾಜಿಸಿ, ಕನ್ನಡದ ಸಾಹಿತಿಗಳು, ವಿಶೇಷ ವ್ಯಕ್ತಿಗಳ ಭಾವಚಿತ್ರಗಳಿಂದ ಅಲಂಕರಿಸಿ, ಕನ್ನಡದ ಹಾಡುಗಳನ್ನು ಪಸರಿಸುವ ಮೂಲಕ ಕನ್ನಡದ ಕಂಪನ್ನು ಎಲ್ಲೆಲ್ಲೂ ಚೆಲ್ಲುತ್ತಿದ್ದಾರೆ.
ಅಲ್ಲದೆ ಬಸ್‌ನಲ್ಲಿ ಕನ್ನಡದ ಪುಸ್ತಕಗಳ ಸಂಚಾರಿ ಗ್ರಂಥಾಲಯವನ್ನು ಅಳವಡಿಸಿದ್ದು, ಪ್ರಯಾಣಿಕರು ಉಚಿತವಾಗಿ ಈ ಪುಸ್ತಕಗಳನ್ನು ಓದಬೇಕೆಂದು ಇವರ ಆಸೆ. ಪ್ರತೀ ವರ್ಷವೂ ನವೆಂಬರ್ ಬಂದಾಗ ಈ ಕನ್ನಡ ಕೈಂಕರ್ಯದಲ್ಲಿ ಈ ಕನ್ನಡ ಪ್ರೇಮಿಗಳು ತೊಡಗುತ್ತಾರೆ.
ತಮ್ಮ ಕೆಎಸ್ಆರ್ಟಿಸಿ ಬಸ್‌ನಲ್ಲಿ ಕನ್ನಡದ ಕಂಪು ಸೂಸಲು ಸುಮಾರು ₹10 ಸಾವಿರಗಳಷ್ಟು ಖರ್ಚು ಮಾಡುತ್ತಾರಂತೆ. ಮೈಸೂರಿನಿಂದ ಮಂಗಳೂರಿಗೆ ಬಂದಿರುವ ಈ ಬಸ್ ತಿಂಗಳಿಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದೆ.