ಮಂಗಳೂರು: ಮೀನುಗಾರರ ಧ್ವನಿಯಾಗಬೇಕೆಂಬ ಉದ್ದೇಶದಿಂದ ನಾನು ಮೀನುಗಾರರ ಬಳಿಗೆ ಬಂದಿದ್ದೇನೆ ಹೊರತು ಚುನಾವಣಾ ಉದ್ದೇಶದಿಂದ ಬಂದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಖಂಡಿತ ಕಾಂಗ್ರೆಸ್ ಆಡಳಿತ ನಡೆಸಲಿದ್ದು, ಆಗ ಮೀನುಗಾರರಿಗೆ ಸರ್ಕಾರವೇ ಗ್ಯಾರಂಟಿ ನಿಂತು ಸಾಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಸುಲ್ತಾನ್ ಬತ್ತೇರಿಯ ಬೋಳೂರು ಮೊಗವೀರ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೀನುಗಾರರು ಈಗ ಹೇಳಿರುವ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಕುರಿತು ಕಾಂಗ್ರೆಸ್ ಚರ್ಚೆ ನಡೆಸಿ ನಮ್ಮ ಪ್ರಣಾಳಿಕೆಯಲ್ಲಿ ಏನು ತರಬಹುದು ಆ ಕೆಲಸವನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ವಿಧಾನಸೌಧ ಹಾಗೂ ಹೊರಗಡೆ ನಿಮ್ಮ ಧ್ವನಿಯಾಗಿರುವ ಕೆಲಸವನ್ನು ಖಂಡಿತ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೇವಲ ಡೀಸೆಲ್ ಸಬ್ಸಿಡಿ ದರ ಮಾತ್ರವಲ್ಲ ಸಬ್ಸಿಡಿಯನ್ನು ನಾನು ಇಲ್ಲಿಂದ ಬೆಂಗಳೂರು ಮುಟ್ಟುವುದರೊಳಗೆ ಬಿಜೆಪಿಗರು ಬಿಡುಗಡೆ ಮಾಡುವಷ್ಟು ಭಯ ನಿರ್ಮಾಣ ಮಾಡುವಷ್ಟು ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಬಹಳಷ್ಟು ಮೀನುಗಾರರು ಮೀನುಗಾರಿಕೆ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ಇದಕ್ಕೆಲ್ಲ ಪರಿಹಾರ ಹುಡಕಬೇಕಾಗಿದೆ. ತಲತಲಾಂತರದಿಂದ ಮೀನುಗಾರರು ಸಮುದ್ರ ತೀರದಲ್ಲಿ ವಾಸಿಸುತ್ತಿದ್ದಾರೆ. ಇದೀಗ ಸಮುದ್ರತೀರ ಬಿಟ್ಟು 150 ಮೀ. ದೂರಕ್ಕೆ ಹೋಗಿ ಅನ್ನೋದಕ್ಕೆ ಅರ್ಥವಿಲ್ಲ. ಇದಕ್ಕೆ ದಾರಿ ಹುಡುಕಬೇಕಿದೆ ಎಂದೇಳಿದರು.
ಕಟ್ಟಡ ಕಾರ್ಮಿಕರು ಮಾತ್ರವಲ್ಲ ಮೀನುಗಾರರು ಅಸಂಘಟಿತ ಕಾರ್ಮಿಕರು. ಹಾಗಾಗಿ ಎಲ್ಲಾ ಮೀನುಗಾರರು ಅಸಂಘಟಿತ ಕಾರ್ಮಿಕರ ಪರಿಹಾರ ನಿಧಿಗೆ ಅರ್ಜಿ ಹಾಕಿ ಖಂಡಿತ ನಿಮಗೆ ಪರಿಹಾರ ದೊರಕಲಿದೆ. ಬೀದಿ ಬದಿಯಲ್ಲಿ ಮೀನು ವ್ಯಾಪಾರ ಮಾಡುವವರು, ಬಂದರು ಕಾರ್ಮಿಕರು ಎಲ್ಲರೂ ಅಸಂಘಟಿತ ಕಾರ್ಮಿಕರೆ, ಮೊದಲಾಗಿ ಎಲ್ಲರೂ ರಿಜಿಸ್ಟ್ರೇಷನ್ ಮಾಡುವ ಕಾರ್ಯ ಮಾಡಬೇಕು. ನಾವೆಲ್ಲ ನಿಮ್ಮ ಜೊತೆಯಲ್ಲಿ ಇರುತ್ತೇವೆ ಎಂಬ ಭರವಸೆ ನೀಡಿದರು.