ಮಂಗಳೂರು : ಪ್ರಸಿದ್ಧ ಸಾಹಿತಿ ಶ್ರೀಮತಿ ಉಷಾ ಪಿ ರೈ ಮತ್ತು ರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಅವರಿಗೆ 2019-20ರ ಸಾಲಿನ ಅಬ್ಬಕ್ಕ ಪ್ರಶಸ್ತಿ ನೀಡಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.29ರಿಂದ ಮಾರ್ಚ್ 1ರವರೆಗೆ ನಡೆಯುವ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಮಂಗಳೂರಿನ ಕೋಣಾಜೆ ಗ್ರಾಮದ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತರಾದ ತುಳಸಿಗೌಡ ಮತ್ತು ಹರೇಕಳ ಹಾಜಬ್ಬ ಅವರು ವಿಶೇಷ ಆಹ್ವಾನಿತರಾಗಿರಲಿದ್ದಾರೆ. ಅಬ್ಬಕ್ಕ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ, ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ ನಡೆಯಲಿವೆ ಎಂದರು.