ಮಂಗಳೂರು: ಕರಾವಳಿಯಲ್ಲಿ ವ್ಯಾಪಿಸಿರುವ ಕೊಂಕಣಿ ಭಾಷಿಗರು ಸೀಮಿತ ಸಂಖ್ಯೆಯಲ್ಲಿದ್ದಾರೆ. ಕೊಂಕಣಿಯಲ್ಲಿ ಸಿನಿಮಾಗಳ ನಿರ್ಮಾಣ ಕೂಡ ಕಡಿಮೆಯೇ. ಆದರೆ ಇತ್ತೀಚಿನ 'ಅಸ್ಮಿತಾಯ್' ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
- " class="align-text-top noRightClick twitterSection" data="">
'ಮಾಂಡ್ ಸೊಭಾಣ್' ನಿರ್ಮಾಣದ 'ಅಸ್ಮಿತಾಯ್' ಸೆಪ್ಟೆಂಬರ್ 15ರಂದು ತೆರೆಗೆ ಬಂದಿದೆ. ಈವರೆಗೆ ವಿಶ್ವಾದ್ಯಂತ 13 ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಈ ಸಿನಿಮಾ ಈಗಾಗಲೇ 83 ದಿನ ಪೂರೈಸಿದ್ದು, ಕೊಂಕಣಿ ಚಲನಚಿತ್ರ ಕ್ಷೇತ್ರದಲ್ಲಿ ಹೊಸ ದಾಖಲೆಯಾಗಿದೆ. ಡಿಸೆಂಬರ್ 2ರಂದು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲ್ನಲ್ಲೂ ಸಿನಿಮಾ ಪ್ರದರ್ಶನಗೊಂಡಿದ್ದು, ಇದು ಕೊಂಕಣಿ ಸಿನಿಮಾಗೆ ಸಿಕ್ಕ ದೊಡ್ಡ ಗೌರವವಾಗಿದೆ.
'ಚಲನಚಿತ್ರದಿಂದ ಚಳುವಳಿ' ಎಂಬ ಧ್ಯೇಯದೊಂದಿಗೆ ಮಾಂಡ್ ಸೊಭಾಣ್ ಸಂಸ್ಥೆ ಚಿತ್ರ ನಿರ್ಮಿಸಿದೆ. ಭಾರತ, ಯುಎಇ, ಕುವೈತ್, ಬಹ್ರೇನ್, ಸೌದಿ, ಓಮನ್, ಕತಾರ್, ಇಂಗ್ಲೆಂಡ್, ಐರ್ಲ್ಯಾಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೆರಿಕ ಮತ್ತು ಕೆನಡಾದಲ್ಲಿ ಸಿನಿಮಾ ಪ್ರದರ್ಶನಗೊಂಡಿದೆ.
ಮುಂಬೈ, ಬೆಂಗಳೂರು ಮತ್ತಿತರ ಮಹಾನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಜನರ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತಿದೆ. ಮಂಗಳೂರಿನ ಭಾರತ್ ಸಿನೆಮಾದಲ್ಲಿ 'ಅಸ್ಮಿತಾಯ್' ಹತ್ತನೇ ವಾರದ ಪ್ರದರ್ಶನ ಮುಂದುವರಿಸಿದ್ದು, ಪ್ರತಿದಿನ ಸಂಜೆ 5 ಗಂಟೆಗೆ ಒಂದು ಪ್ರದರ್ಶನ ನಡೆಯುತ್ತಿದೆ.
ಕೊಂಕಣಿಗರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಕಥೆ ಸಾಗುತ್ತದೆ. ಗೋವಾದಿಂದ ವಲಸೆ ಹೋಗುವುದು ಸೇರಿದಂತೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕಥೆಯೊಂದಿಗೆ ತೋರಿಸಲಾಗಿದೆ. ಎರಿಕ್ ಒಝೇರಿಯೊ ಬರೆದ ಮೂಲಕಥೆಗೆ ಜೊಯೆಲ್ ಪಿರೇರಾ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದು, ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ಮಾಡಿದ್ದಾರೆ. ಬಾಲರಾಜ ಗೌಡ ಸುಂದರವಾಗಿ ಸೆರೆ ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಎಡಿಟ್ ಮಾಡಿದ್ದಾರೆ. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೋ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.
ಆರು ಹಾಡುಗಳಿಗೆ ಆಲ್ವಿನ್ ಫರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಸಂಗೀತ ರಚಿಸಿದ್ದು, ಪ್ರಸಿದ್ಧ ಗಾಯಕ ನಿಹಾಲ್ ತಾವ್ರೊ ಸೇರಿದಂತೆ ಹಲವರು ದನಿಗೂಡಿಸಿದ್ದಾರೆ. ಡೆನಿಸ್ ಮೊಂತೆರೊ, ಅಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕರ್, ಗೌರೀಶ್ ವೆರ್ಣೆಕರ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್, ಸುನೀಲ್ ಸಿದ್ದಿ, ಲುಲು ಫೊರ್ಟೆಸ್, ನವೀನ್ ಲೋಬೊ, ಆಲ್ವಿನ್ ವೇಗಸ್ ಸೇರಿದಂತೆ ಗೋವಾ ಮತ್ತು ಮಂಗಳೂರಿನ ಖ್ಯಾತ ಕಲಾವಿದರು ನಟಿಸಿದ್ದಾರೆ. ಇತರೆ ಸುಮಾರು 500ಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಪ್ರಥಮ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ
ಈ ಬಗ್ಗೆ ಮಾತನಾಡಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೋ, "ಅಸ್ಮಿತಾಯ್ ನಮ್ಮ ಮೊದಲ ಸಿನಿಮಾ. ಕಮರ್ಷಿಯಲ್ ಮಾಡುವ ಉದ್ದೇಶದಿಂದ ಈ ಚಿತ್ರ ಮಾಡಿದ್ದಲ್ಲ. ಕೊಂಕಣಿ ಭಾಷೆಯನ್ನು ಬೆಳೆಸುವ ಉದ್ದೇಶದಲ್ಲಿ ಇದನ್ನು ಮಾಡಲಾಗಿದೆ. ಈ ಚಿತ್ರದಲ್ಲಿ ಕೊಂಕಣಿ ಇತಿಹಾಸ ಮತ್ತು ವಿವಿಧ ವಿಭಾಗಗಳ ಸಾಂಸ್ಕೃತಿಕ ವೈಭವ ತೋರಿಸಿದ್ದೇವೆ. ಜನರು ಇದನ್ನು ತಮ್ಮ ಚಲನಚಿತ್ರ ಎಂದು ಸ್ವೀಕರಿಸಿದ್ದಾರೆ. ಕೊಂಕಣಿ ಚಲನಚಿತ್ರಕ್ಕೆ ಇದೇ ಮೊದಲ ಬಾರಿಗೆ ಈ ರೀತಿಯ ಪ್ರೋತ್ಸಾಹ ಸಿಕ್ಕಿದೆ. ಅಮೆರಿಕದಲ್ಲಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲ್ಲ್ಲಿ ಮೊದಲ ಬಾರಿಗೆ ಕೊಂಕಣಿ ಚಲನಚಿತ್ರ ಪ್ರದರ್ಶನವಾಗಿದೆ. ಅಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾವೇ ಅಸ್ಮಿತಾಯ್. ಈ ಚಲನಚಿತ್ರವನ್ನು ಚಳುವಳಿಯಾಗಿ ತೆಗೆದುಕೊಂಡಿದ್ದೇವೆ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಕೊಂಕಣಿ ನಮ್ಮ ಅಸ್ಮಿತಾಯ್ ಎಂಬ ಬ್ಯಾಡ್ಜ್ ಕೊಡುತ್ತಿದ್ದೇವೆ. ಈಗಾಗಲೇ 495 ಪ್ರದರ್ಶನಗಳಾಗಿವೆ" ಎಂದು ತಿಳಿಸಿದರು.
ಇದನ್ನೂ ಓದಿ: 500 ಕೋಟಿ ಗಡಿ ದಾಟಿದ 'ಅನಿಮಲ್' ಸಿನಿಮಾ: ಕಲೆಕ್ಷನ್ ಮಾಹಿತಿ ಇಲ್ಲಿದೆ