ಸುಳ್ಯ (ಮಂಗಳೂರು): ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ರಬ್ಬರ್ ತೋಟದಲ್ಲಿ ಸುಮಾರು 27 ಬ್ಲಾಕ್ಗಳಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ ಸಿಂಪಡಿಸದೆ, ನಿಗಮಕ್ಕೆ ವಂಚನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೆಲ ದಿನಗಳ ಹಿಂದೆ ರಬ್ಬರ್ ಮರಗಳಿಗೆ ಔಷಧಿ ಸಿಂಪಡಿಸುವ ಕಾಮಗಾರಿಯನ್ನು ಕೇರಳದ ಬಿಜು ಎಂಬವರಿಗೆ ನೀಡಿದ್ದು, ಇವರು ರಬ್ಬರ್ ಬ್ಲಾಕ್ಗಳಲ್ಲಿನ ಹಲವು ಕಡೆಗಳಲ್ಲಿ ಔಷಧಿ ಸಿಂಪಡಿಸದೆ ತೆರಳಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಮಸ್ತಾನ್ ಎಂಬವರು ಹಾಗೂ ಇಲ್ಲಿನ ಇತರ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ವ್ಯಕ್ತವಾಗಿದೆ.
ಸರಿಯಾದ ರೀತಿಯಲ್ಲಿ ಔಷಧಿ ಸಿಂಪಡಿಸದಿದ್ದರೆ ಮರದ ಎಲೆಗಳು ಉದುರಿ ರಬ್ಬರ್ ಹಾಲು ಕಡಿಮೆಯಾಗುತ್ತದೆ. ರಬ್ಬರ್ ಹಾಲು ಕಡಿಮೆಯಾದರೆ ಅದರ ನಷ್ಟಕ್ಕೆ ಕಾರ್ಮಿಕರನ್ನು ಹೊಣೆಗಾರರನ್ನಾಗಿ ಮಾಡಲು ಅಧಿಕಾರಿಗಳು ಸಂಚು ಹೂಡಿದ್ದಾರೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಹಲವು ಬಾರಿ ಮಾಧ್ಯಮ ವರದಿಗಳು ಪ್ರಕಟವಾದರೂ ಈ ತನಕ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೊಪಿಸಿದ್ದಾರೆ.
ಔಷಧ ಸಿಂಪಡಣೆ ಅವ್ಯವಹಾರ ಬಗ್ಗೆ ಕೆಎಫ್ಡಿಸಿ ಅಧಿಕಾರಿ ಮಸ್ತಾನ್ ಅವರು ಮಾತನಾಡಿ, ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದನ್ನು ತಡೆಹಿಡಿಯಲಾಗಿದೆ ಎಂದಿದ್ದಾರೆ. ಅವ್ಯವಹಾರ ಮಾಡಿ ಬಿಲ್ ತಡೆಹಿಡಿದು ಪ್ರಕರಣವನ್ನು ಇಲ್ಲಿಗೆ ಮುಚ್ಚಿಹಾಕುವಂತಾಗಬಾರದು ಎಂಬುದು ಸ್ಥಳೀಯ ಕಾರ್ಮಿಕರ ಅಭಿಪ್ರಾಯವಾಗಿದೆ.