ಮಂಗಳೂರು : ಕಡಲನಗರಿ ಮಂಗಳೂರಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿದೆ. ಇಲ್ಲಿ ಒಲಿಂಪಿಕ್ಗೂ ತಯಾರಿ ನಡೆಸಲು ತರಬೇತಿ ಸಿಗುತ್ತದೆ ಎಂಬುದು ವಿಶೇಷವಾಗಿದೆ.
ನಗರದ ಎಮ್ಮೆಕೆರೆಯಲ್ಲಿ 2.50 ಎಕರೆ ಪ್ರದೇಶದಲ್ಲಿ ಈ ಈಜುಕೊಳ ನಿರ್ಮಾಣಗೊಂಡಿದೆ. ಸಾಧಾರಣವಾಗಿ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಕೆಲವೊಂದು ಬಹುಮಹಡಿಯ ಮೇಲಂತಸ್ತಿನಲ್ಲಿ ಸಣ್ಣ ಮಟ್ಟಿನ ಈಜುಕೊಳ ಇದೆಯಾದರೂ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳಗಳು ನೆಲ ಅಂತಸ್ತಿನಲ್ಲಿರುತ್ತವೆ. ಆದರೆ ಮಂಗಳೂರಿನಲ್ಲಿ ನಿರ್ಮಾಣವಾದ ಈ ಈಜುಕೊಳವು ನೆಲದಲ್ಲಿರದೆ ಬದಲಾಗಿ ಎರಡನೇ ಅಂತಸ್ತಿನಲ್ಲಿದೆ.
ಈಜು ತರಬೇತಿಗೆ, ಮಕ್ಕಳಿಗೆ ಹಾಗೂ ಸ್ಪರ್ಧೆಗೆಂದು ಮೂರು ಪ್ರತ್ಯೇಕ ಈಜುಕೊಳ ಇಲ್ಲಿ ನಿರ್ಮಾಣ ಮಾಡಲಾಗಿದೆ. ಈ ಈಜುಕೊಳಕ್ಕೆ 12ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಬಳಿಕ ಹೆಚ್ಚುವರಿ ಅನುದಾನ ಬಿಡುಗಡೆಯಾಗಿ ಇದೀಗ 24.94ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. 2 ಎಕರೆ ಪ್ರದೇಶದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣವಾಗಿದೆ.
ಈಜುಕೊಳದ ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದ್ದು, ಪ್ರಥಮ ಮಹಡಿಯಲ್ಲಿ ಜಿಮ್, ಡ್ರೆಸ್ ಚೇಜಿಂಗ್ ರೂಂ, ಶೌಚಾಲಯ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಲಾಕರ್ ವ್ಯವಸ್ಥೆ, ಉದ್ದೀಪನ ತಪಾಸಣಾ ಲ್ಯಾಬ್ ಇದೆ. ಎರಡನೇ ಮಹಡಿಯಲ್ಲಿ ಮೂರು ಈಜುಕೊಳಗಳಿವೆ. ಈಜು ಕೊಳದ ಪಕ್ಕದಲ್ಲಿ ಕೆಫೆಟೇರಿಯಾ, 400 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ವ್ಯವಸ್ಥೆಯಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲು ಈ ಎಲ್ಲಾ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈಜುಕೊಳ ಲೋಕಾರ್ಪಣೆಯಾಗುವ ನವೆಂಬರ್ 25 ರಂದು 19ನೇ ಮಾಸ್ಟರ್ ನ್ಯಾಷನಲ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಈಜುಸ್ಪರ್ಧೆ ನಡೆಯಲಿದೆ. ಈಗಾಗಲೇ 700 ಸ್ಪರ್ಧಿಗಳು ದಾಖಲಾತಿ ಮಾಡಿಕೊಂಡಿದ್ದು, ಸುಮಾರು 850 - 1000 ಸ್ಪರ್ಧಿಗಳು ಬರುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗಿರುವುದು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ದೊರಕಿದಂತಾಗಿದೆ. ಸ್ಥಳೀಯ ಈಜುಪಟುಗಳು ರಾಷ್ಟ್ರ - ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನುವ ದೂರದೃಷ್ಟಿತ್ವದಿಂದ ಇದನ್ನು ನಿರ್ಮಿಸಲಾಗಿದೆ.
ಎರಡನೇ ಅಂತಸ್ತಿನಲ್ಲಿ ಮೂರು ಈಜುಕೊಳವಿದ್ದು ಇದರಲ್ಲಿ ಒಂದು ಮಕ್ಕಳಿಗೆ, ಮತ್ತೊಂದು ಪ್ರಾಕ್ಟಿಸ್ಗೆ ನಿರ್ಮಾಣ ಮಾಡಲಾಗಿದೆ. ಇನ್ನೊಂದು ಸ್ಪರ್ಧೆಗೆ ನಿರ್ಮಿಸಲಾಗಿದೆ. ಸ್ಪರ್ಧೆಯ ಈಜುಕೊಳ 25 ಮೀಟರ್ ಅಗಲ ಮತ್ತು 50 ಮೀಟರ್ ಉದ್ದ ವ್ಯಾಸದಲ್ಲಿದೆ. ಈಜಿನ ಆರಂಭದ ಆಳ 2.2 ಮೀಟರ್ ಇದ್ದು, ಅಂತ್ಯ 1.4 ಮೀಟರ್ ಆಳವಿದೆ. ಇವುಗಳನ್ನು ಅಂತಾರಾಷ್ಟ್ರೀಯ ಕ್ರೀಡೆಯ ಮಾನದಂಡದಂತೆ ನಿರ್ಮಾಣ ಮಾಡಲಾಗಿದೆ.
ಅಂತಾರಾಷ್ಟ್ರೀಯ ಮಾನದಂಡದಂತೆ ನಿರ್ಮಾಣ ಮಾಡುವ ಈ ಈಜುಕೊಳದಲ್ಲಿ ಒಲಿಂಪಿಕ್ಸ್ಗೆ ತರಬೇತಿ ನೀಡಲು ಯೋಜಿಸಲಾಗಿದೆ. ಪರಿಣಿತರ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಈಜುಪಟುಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಇದರ ರೂಪುರೇಷೆ ಇನ್ನಷ್ಟೇ ಸಿದ್ಧವಾಗಬೇಕಿದೆ.
ಈ ಬಗ್ಗೆ ಮಾತನಾಡಿದ ಸ್ಮಾರ್ಟ್ ಸಿಟಿ ತಾಂತ್ರಿಕ ಪ್ರಧಾನ ಪ್ರಬಂಧಕ ಅರುಣ ಪ್ರಭ ಅವರು ಸ್ಮಾರ್ಟ್ ಸಿಟಿಯ ಪ್ರಮುಖ ಯೋಜನೆ ಇದು. ಒಲಿಂಪಿಕ್ ಬೇಕಾದ ಈಜುಕೊಳ. ಇದಕ್ಕೆ ಫಿನಾ ಅವರ ಮಾನದಂಡದಂತೆ ಮಾಡಲಾಗಿದೆ. ಇದರಲ್ಲಿ 10 ಲೇನ್ ಈಜುಕೊಳವಿದೆ. ಈ ಈಜುಕೊಳವನ್ನು ತಳಮಟ್ಟದಿಂದ 7 ಮೀಟರ್ ಮೇಲೆ ನಿರ್ಮಾಣ ಮಾಡಲಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆ ಮಾಡಲು ಬೇಕಾದ ವ್ಯವಸ್ಥೆ ಇಲ್ಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಕಾರವಾರದಲ್ಲಿ ಜಲಸಾಹಸ ಚಟುವಟಿಕೆ: ರಾಷ್ಟ್ರ, ಅಂತಾರಾಷ್ಟ್ರೀಯ ಪಟುಗಳ ಸಜ್ಜುಗೊಳಿಸುವುದೇ ಗುರಿ