ಮಂಗಳೂರು: ಇಂದಿರಾಗಾಂಧಿಯವರು ದೇಶದ ಪ್ರಧಾನಿಯಾದ ಬಳಿಕ ದುರ್ಬಲ ವರ್ಗದವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದುರ್ಬಲ ವರ್ಗದವರು, ನಿಕೃಷ್ಟ ಸ್ಥಿತಿಯಲ್ಲಿದ್ದವರು, ಮುಖಂಡರಾದಲ್ಲಿ ಅವರು ತಮ್ಮ ಸಮಾಜದ ಏಳಿಗೆಗಾಗಿ ಹೋರಾಟ ಮಾಡೋದು ಸರ್ವೇ ಸಾಮಾನ್ಯ.
ಆದರೆ, ಇಂದಿರಾಗಾಂಧಿಯವರು ದೇಶದ ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವರಾಗಿದ್ದರೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ನ್ಯಾಯ ಕೊಡಿಸುವಲ್ಲಿ ಶ್ರಮವಹಿಸಿದರು ಎಂದರು.
ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ ಹಾಗೂ ಇಂದಿರಾಗಾಂಧಿಯವರನ್ನು ಟೀಕೆ ಮಾಡುತ್ತಲೇ ಬಂದಿರುವ ಸಂಘಪರಿವಾರದವರು ಈಗ ಅಧಿಕಾರದಲ್ಲಿದ್ದಾರೆ. ಆದರೆ, ಇಂದಿರಾಗಾಂಧಿಯವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದರು.
ಕಾಂಗ್ರೆಸ್‌ನ ಅನೇಕ ಮಂದಿ ಭಯೋತ್ಪಾದನೆಗೆ ಆಹುತಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಕಾಂಗ್ರೆಸ್ ಪಾತ್ರ ಬಹಳ ಹಿರಿದಾದುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ: 'ರೈತ ಹಕ್ಕುಗಳ ದಿನ' ಘೋಷಣೆಯಡಿ ಕೇಂದ್ರ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ದ.ಕ.ಜಿಲ್ಲೆಯಲ್ಲಿ ಭೂಮಾಲೀಕರು ದೊಡ್ಡ ಸಂಖ್ಯೆಯಲ್ಲಿದ್ದು, ಇಂದಿರಾಗಾಂಧಿಯವರ ಕಾಲದಲ್ಲಿ ದುರ್ಬಲವರ್ಗದವರು ಭೂಮಿಯ ಒಡೆತನದ ಹಕ್ಕನ್ನು ಪಡೆದರು. ಆದರೆ, ಇಂದಿನ ಸರ್ಕಾರ ಭೂಸುಧಾರಣಾ ಕಾನೂನಿಗೆ ತಿದ್ದುಪಡಿ ತರುವ ಕೆಲಸ ಮಾಡುತ್ತಿದೆ.
ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಇದನ್ನು ವಿರೋಧಿಸಬೇಕಾದ ಅನಿವಾರ್ಯತೆ ಇದೆ ಎಂದರು.