ಪುತ್ತೂರು: ದೇಯಿ ಬೈದೆತಿ ಮತ್ತು ಕೋಟಿ- ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಲ್ನಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿ ನೇಮೋತ್ಸವಕ್ಕೆ ವೈಭವದ ಹೊರಕಾಣಿಕೆ ಮೆರವಣಿಗೆ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಸಹಸ್ರಾರು ವಾಹನಗಳೊಂದಿಗೆ ಜರುಗಿತು.
ಭವ್ಯ ಮೆರವಣಿಗೆಯನ್ನು ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ ದೇವಸ್ಥಾನದ ರಾಜಗೋಪುರದ ಮುಂಭಾಗದಲ್ಲಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಬಳಿಕ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಹಾಗೂ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಕುಂದಾಪುರ, ಉಡುಪಿ, ಮೂಲ್ಕಿ ಭಾಗದ ಹೊರಕಾಣಿಕೆ ಮಂಗಳೂರಿನ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಸೇರಿ ಅಲ್ಲಿಂದ ಬೆಳಗ್ಗೆ ಬಿ.ಸಿ.ರೋಡ್ ನಾರಾಯಣ ಮಂದಿರವನ್ನು ತಲುಪಿತ್ತು. ಉಳ್ಳಾಲ, ಮುಡಿಪು, ಮೂಡಬಿದ್ರೆ, ಕಾರ್ಕಳದಿಂದ ಆಗಮಿಸಿದ ಹೊರಕಾಣಿಕೆ ಗುರುವಾಯನಕೆರೆ, ಉಜಿರೆ, ಬೆಳ್ತಂಗಡಿ ಭಾಗದ ಹೊರಕಾಣಿಕೆಯೊಂದಿಗೆ ಸೇರಿ, ಕಾಸರಗೋಡು, ವಿಟ್ಲ, ನೆಲ್ಯಾಡಿ, ಕಡಬ ಸೇರಿದಂತೆ ವಿವಿಧ ಕಡೆಗಳಿಂದ ಹೊರಕಾಣಿಕೆ ಮಧ್ಯಾಹ್ನದ ವೇಳೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗಮಗೊಂಡಿತು. ಬಳಿಕ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.
ವಿಶೇಷ ಆಕರ್ಷಣೆ: ಸಾವಿರಕ್ಕೂ ಅಧಿಕ ವಿವಿಧೆಡೆಗಳಿಂದ ಬಂದ ಹೊರಕಾಣಿಕೆ ವಾಹನಗಳು ದೇವಸ್ಥಾನದಿಂದ ತೆರಳಿದವು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕಲ್ಲಡ್ಕ ಶಿಲ್ಪಾ ಬೊಂಬೆ ಮೇಳೈಸಿತು. ಬಳಿಕ ಹೊರಕಾಣಿಕೆ ಕಲ್ಲಡ್ಕ ಬೊಂಬೆ, ಚೆಂಡೆ, ಜಾಗಟೆಯೊಂದಿಗೆ ಪುತ್ತೂರು ಮುಖ್ಯರಸ್ತೆಯಿಂದ ದರ್ಬೆ ಮೂಲಕ ಸಾಗಿ ಸಂಜೆ ವೇಳೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯನ್ನು ತಲುಪಿತು.
ಈ ಸಂದರ್ಭದಲ್ಲಿ ದೇಯಿ ಬೈದೆತಿ ಮತ್ತು ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ರಾಷ್ಪರ ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.