ಮಂಗಳೂರು: ಮೀನು ಯಾವಾಗ ಜಾರಿ ಹೋಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ನನ್ನ ಕೈಯಿಂದ ಜಾರಿ ಹೋದಾಗ ಅಂಗಾರರು ಇಟ್ಟುಕೊಂಡಿದ್ದಾರೆ. ಅಂಗಾರರೇ, ಅದು ಜಾರಿ ಹೋಗದಂತೆ ಗಟ್ಟಿಯಾಗಿ ಇಟ್ಟುಕೊಳ್ಳಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂತನ ಮೀನುಗಾರಿಕೆ ಸಚಿವ ಅಂಗಾರರಿಗೆ ಸಲಹೆ ನೀಡಿದರು.
ನೂತನ ಸಚಿವರಾಗಿ ನೇಮಕಗೊಂಡ ಅಂಗಾರ ಎಸ್. ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ನೇಮಕಗೊಂಡ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಅಭಿನಂದನಾ ಕಾರ್ಯಕ್ರಮ ನಡೆದಿದ್ದು, ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಂಗಾರರಿಗೆ ಈ ಸಲಹೆ ನೀಡಿದ್ದಾರೆ.
ಹಿಂದಿನ ಕಾಲದಲ್ಲಿ ರಾಜಕಾರಣವೆಂಬುದು ಸೇವಾಕಾರ್ಯಗಳೊಂದಿಗೆ ನಡೆಯುತ್ತಿತ್ತು. ಆದರೆ ಇದೀಗ ರಾಜಕಾರಣಿಗಳು, ಚುನಾವಣೆಗೆ ಚುನಾವಣಾ ಆಯೋಗ ನಿಗದಿಪಡಿಸಿದ 25 ಲಕ್ಷದ ಮಿತಿಯಲ್ಲಿ, 25 ಕೋಟಿ ರೂ. ಖರ್ಚು ಮಾಡಿ 25 ಲಕ್ಷದ ಲೆಕ್ಕ ತೋರಿಸುವ ಹಂತಕ್ಕೆ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಅಂಗಾರ, ನಾನು ಸಾಮಾನ್ಯ ಕೂಲಿಕಾರ್ಮಿಕ. ನನ್ನನ್ನು ಸಂಘಟನೆಯು ಸಂಸ್ಕಾರ ಕೊಟ್ಟು ಬೆಳೆಸಿದ ಕಾರಣಕ್ಕೆ ಈ ಮಟ್ಟಕ್ಕೆ ಬಂದಿದ್ದೇನೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 25 ಲಕ್ಷ ರೂ. ನಿಧಿ ಸಮರ್ಪಣೆ
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮುಜರಾಯಿ ದೇವಸ್ಥಾನಗಳು ಸಹಕಾರ ಬ್ಯಾಂಕುಗಳಿಗೆ ಸಹಕಾರ ನೀಡಬೇಕು, ಆ ನಿಟ್ಟಿನಲ್ಲಿ ಮುಜರಾಯಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಕಾನೂನಿನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಲಿ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೂ ಮುನ್ನ ಬ್ಯಾಂಕ್ ಸಭಾಂಗಣದಲ್ಲಿ ಏಕರೂಪದ ತಂತ್ರಾಂಶ ಅಳವಡಿಕೆ, ವಾಹನದ ಫಲಾನುಭವಿಗಳಿಗೆ ಸಾಲ ಪತ್ರ ವಿತರಣೆ ಮತ್ತು ಬ್ಯಾಂಕ್ ಎಟಿಎಂ ಅನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಶಾಸಕ ಬೆಳ್ಳಿ ಪ್ರಕಾಶ್ ಉದ್ಘಾಟಿಸಿದರು.