ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲೂಕಿನ ಹಲವೆಡೆ ಭಾರೀ ಮಳೆ ಸುರಿದಿದ್ದು, ಕೆಲವು ಕಡೆ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಕೊಯ್ಯೂರು ಗ್ರಾಮದಲ್ಲಿ ಗಾಳಿ ಮಳೆಗೆ ಫಲಭರಿತ ಅಡಿಕೆ, ಬಾಳೆ ಗಿಡಗಳು ಸಂಪೂರ್ಣ ನೆಲಸಮವಾಗಿವೆ.
ಕೊಯ್ಯೂರು ಗ್ರಾಮದ ಉಗ್ರೋಡಿ ರಶ್ಮಿ ದೇವಿ ಎಂಬುವವರ 75ಕ್ಕೂ ಹೆಚ್ಚಿನ ಅಡಿಕೆ ಮರ, ಚಂದ್ರಶೇಖರ್ ಎಂಬುವರ 50ಕ್ಕೂ ಹೆಚ್ಚಿನ ಅಡಿಕೆ ಮರ, ಸುಮಾರು ಶೇ. 60ರಷ್ಟು ನೇಂದ್ರ ಬಾಳೆ, ಸೋಮನಾಥರ 50ರಷ್ಟು ಅಡಿಕೆ, ಪೂವಪ್ಪ ಗೌಡರ 100ಕ್ಕೂ ಮಿಕ್ಕಿದ ಅಡಿಕೆ ಮರಗಳು, ಇತರ ಕೃಷಿ ಮತ್ತು ಸಮೀಪದ ಕೆಲವು ಕೃಷಿಕ ಕುಟುಂಬದವರಿಗೆ ಅಪಾರ ನಷ್ಟ ಉಂಟಾಗಿದೆ.
ಇದರಿಂದ ಕೃಷಿಯನ್ನೇ ನಂಬಿದ್ದ ಜನರಿಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆ ಸಂಬಂಧಿಸಿದ ಇಲಾಖೆಯವರು ತಕ್ಷಣ ಸ್ಪಂದಿಸುವ ಮೂಲಕ ಕೃಷಿಕ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.