ಕಡಬ (ದಕ್ಷಿಣ ಕನ್ನಡ): ರೈಲು ಇಂಜಿನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಒಂದು ಕೈ ಕಾಲು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಎಂದು ಗುರುತಿಸಲಾಗಿದೆ. ರೈಲು ಇಂಜಿನ್ ಡಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಲ್ಲಿ ನಿನ್ನೆ ನಡೆದ ಕ್ರೀಡಾಕೂಟದಲ್ಲಿ ಗಾಯಗೊಂಡ ನಾಗಣ್ಣನ ಪುತ್ರಿ ಭಾಗವಹಿಸಿದ್ದರು. ಪುತ್ರಿ ಭಾಗವಹಿಸಿದ್ದ ಕ್ರೀಡಾಕೂಟ ನೋಡಿ ವಾಪಸ್ ನೆಟ್ಟಣ ರೈಲು ನಿಲ್ದಾಣಕ್ಕೆ ತನ್ನ ತಮ್ಮ ಸತೀಶ ಓಟೆಕಜೆ ಎಂಬುವರ ಜೊತೆ ಬಂದಿಳಿದಿದ್ದರು. ಬಳಿಕ ಅಲ್ಲಿಂದ ಅಡ್ಡ ದಾರಿ ಮೂಲಕ ಮನೆಯತ್ತ ತೆರಳಲು ನಿಲ್ದಾಣದ ಸಮೀಪದಲ್ಲೇ ರೈಲು ಹಳಿ ದಾಟುತ್ತಿದ್ದರು. ಆಗ ಏಕಾಏಕಿ ರೈಲು ಇಂಜಿನ್ ಬಂದಿದೆ.
ಡಿಕ್ಕಿಯ ರಭಸಕ್ಕೆ ನಾಗಣ್ಣನ ಬಲಮುಂಗೈ ಮತ್ತು ಕಾಲು ಕಟ್ ಆಗಿದೆ. ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
(ಓದಿ: ಆನೆಗೆ ಡಿಕ್ಕಿ ಹೊಡೆದ ರಾಜಧಾನಿ ಎಕ್ಸ್‌ಪ್ರೆಸ್ : ತಾಯಿ ಮತ್ತು ಮರಿ ಗಜ ಸಾವು)