ಕಡಬ: ಹಲವು ವರ್ಷಗಳಿಂದ ಕಡಬ ಗ್ರಾ.ಪಂ. ಕಚೇರಿಯ ವಠಾರದಲ್ಲಿ ತುಕ್ಕು ಹಿಡಿಯುತ್ತಿದ್ದ ಸರ್ಕಾರಿ ಜೀಪು ಕೊನೆಗೂ ಮೂವತ್ತು ಸಾವಿರಕ್ಕೆ ಹರಾಜಾಗಿದೆ.
ಕಡಬ ಗ್ರಾಮ ಪಂಚಾಯತ್ ಕಟ್ಟಡದ ಬಳಿ ತುಕ್ಕು ಹಿಡಿದು ನಾಶವಾಗುತ್ತಿದ್ದ ಹಳೇ ಜೀಪು ಮತ್ತು ಜನರೇಟರ್ ಬಗ್ಗೆ ಈಟಿವಿ ಭಾರತ್ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಇದು ಕಡಬ ತಹಶಿಲ್ದಾರರು ಸೇರಿದಂತೆ ಅಧಿಕಾರಿಗಳ ಗಮನಕ್ಕೆ ಬಂದು ಕಡಬ ತಹಶಿಲ್ದಾರ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಹಿರಂಗ ಹರಾಜು ಪ್ರಕ್ರಿಯೆಯ ನಿರ್ಧಾರ ತೆಗೆದುಕೊಂಡರು.
ಇಂದು ಈ ಜೀಪನ್ನು ಬಹಿರಂಗ ಹರಾಜು ಮಾಡಲಾಗಿದೆ. ಕಂದಾಯ ಇಲಾಖಾ ಹಳೆ ಜೀಪು ಹರಾಜು ಪ್ರಕಟಣೆ 12-02-2020ರಂತೆ ಏಲಂ ಮಾಡಲಾಗಿದ್ದು, 5 ಜನ ಬಿಡ್ಡುದಾರರ ಪೈಕಿ ಅತೀ ಹೆಚ್ಚಿನ ಬಿಡ್ಡುದಾರ ಪುತ್ತೂರಿನ ಪರ್ಲಡ್ಕ ಕಲ್ಲಿಮಾರ್ ಕುಮಾರ ನಿಲಯ ನಿವಾಸಿ ಭೀಮಭಟ್ 30 ಸಾವಿರಕ್ಕೆ ಜೀಪನ್ನು ಖರೀದಿಸಿದ್ದಾರೆ.
ಇನ್ನು ಇದರ ಪಕ್ಕದಲ್ಲಿರುವ ಜನರೇಟರ್ ಬಗ್ಗೆಯೂ ಈಟಿವಿ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಡಬ ತಹಶಿಲ್ದಾರ್ ಜಾನ್ ರೋಡ್ರಿಗಸ್ ಅವರು, ಇಂದು ಪಂಚಾಯತ್ ಕಟ್ಟಡದ ಬಳಿ ಇದ್ದ ಜೀಪನ್ನು ಹರಾಜು ಮಾಡಲಾಗಿದೆ. ಅದರ ಸಮೀಪವೇ ಇರುವ ಜನರೇಟರನ್ನು ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡಿಸಿ ಪಂಚಾಯತ್ ಮತ್ತು ಕಂದಾಯ ಇಲಾಖೆಯ ಅಗತ್ಯಕ್ಕಾಗಿ ಬಳಸಲಾಗುವುದು ಎಂದು ಹೇಳಿದ್ದಾರೆ.
ಕಡಬ ತಹಶಿಲ್ದಾರ್ ಅವರು ಏಲಂ ಪ್ರಕ್ರಿಯೆ ನಡೆಸಿದ್ದು, ಉಪತಹಶಿಲ್ದಾರುಗಳಾದ ಕೆ.ಟಿ. ಮನೋಹರ್ ಹಾಗೂ ನವ್ಯ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಗ್ರಾ.ಪಂ ಸದಸ್ಯ ಶೆರಿಫ್ ಎ.ಎಸ್ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ಪ್ರಥಮ ದರ್ಜೆ ಗುಮಾಸ್ತೆ ಭಾರತಿ, ಗ್ರಾಮ ಸಹಾಯಕರಾದ ರಮೇಶ್ ರಾವ್, ವಿಜಯಕುಮಾರ್, ಸಹಕರಿಸಿದರು.