ಮಂಗಳೂರು: ನಗರದ ಆತ್ಮಹತ್ಯಾ ತಾಣ ಎಂಬ ಅಪವಾದಕ್ಕೆ ಕಾರಣವಾಗಿರುವ ಉಳ್ಳಾಲ ಸೇತುವೆಗೆ ತಡೆಬೇಲಿಯನ್ನು ಹಾಕಲು ಸರ್ಕಾರ ತೀರ್ಮಾನಿಸಿದೆ.
ನಗರದಿಂದ ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಪ್ರಕರಣಗಳು ಇತ್ತೀಚಿಗೆ ಹೆಚ್ಚಿದ್ದವು. ಅಲ್ಲದೇ ಕೆಫೆ ಡೇ ಮಾಲೀಕ ಸಿದ್ದಾರ್ಥ್ ಅವರು ಕೂಡಾ ಇದೇ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ( ಮೂಡ)ದಿಂದ ನಿರ್ಮಾಣವಾಗುತ್ತಿರುವ ಸುಮಾರು 800 ಮೀಟರ್ ಉದ್ದದ ಈ ಸೇತುವೆಯಲ್ಲಿ ಒಟ್ಟು 4 ತಡೆಗೋಡೆಗಳು ಬರುತ್ತವೆ. ಈ ಸೇತುವೆಯಲ್ಲಿ 3.2 ಕಿಲೋಮೀಟರ್ ಉದ್ದದ ತಡೆಬೇಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಸೇತುವೆಯ ಈಗಿರುವ ತಡೆಗೋಡೆ 2.5 ಅಡಿ ಎತ್ತರವಿದೆ. ಇದರ ಮೇಲೆ 3 ಅಡಿಯ ತಡೆಬೇಲಿ ನಿರ್ಮಿಸಿ ಅದರ ಮೇಲೆ ಮುಳ್ಳಿನ ಸರಿಗೆಯ ತಂತಿಬೇಲಿಯನ್ನು ಅಡ್ಡವಾಗಿ ಹಾಕಲಾಗುತ್ತದೆ. ಇದರಿಂದಾಗಿ ನದಿಗೆ ಹಾರಲು ಯಾರಿಗೂ ಸಾಧ್ಯವಾಗದಂತೆ ಬೇಲಿ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಒಟ್ಟು 55 ಲಕ್ಷ ರೂ ವೆಚ್ಚವಾಗಲಿದೆ.
ಸೇತುವೆಯ ಮೇಲೆ ತಡೆಬೇಲಿ ಜೊತೆಗೆ ಸೇತುವೆಯ ಉದ್ದಗಲಕ್ಕೂ ಸಿಸಿಟಿವಿ ಅಳವಡಿಕೆಯನ್ನು ಮೂಡದಿಂದ ಮಾಡಿ ಪೊಲೀಸ್ ಠಾಣೆಗೆ ಸಂಪರ್ಕ ನೀಡಲಾಗುತ್ತದೆ. ಇದರಿಂದ ಅಪರಾಧ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆಗೆ ಗಮನ ಹರಿಸಲು ಸಾಧ್ಯವಾಗಲಿದೆ.
ರಾಷ್ಟ್ರೀಯ ಹೆದ್ದಾರಿ ಮೇಲೆ ಹಾದುಹೋಗುವ ಈ ಸೇತುವೆಯಲ್ಲಿ ಪ್ರಯಾಣಿಕರಿಗೆ ಕಾಣಸಿಗುವ ಸೌಂದರ್ಯ ವೀಕ್ಷಣೆಗೂ ಧಕ್ಕೆಯಾಗದಂತೆ, ಆತ್ಮಹತ್ಯೆ ಘಟನೆಗಳೂ ನಡೆಯದಂತೆ ಈ ತಡೆಬೇಲಿ ರೆಡಿಯಾಗಲಿದೆ.