ದಕ್ಷಿಣ ಕನ್ನಡ : ಜಿಲ್ಲೆಯ ವಿವಿಧೆಡೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ಜಯಂತಿ ಕಾರ್ಯಕ್ರಮ ನಡೆಯಿತು. ಗಾಂಧಿ ಜಯಂತಿ ಪ್ರಯುಕ್ತ ಸಂಘ- ಸಂಸ್ಥೆಗಳು ಸ್ವಚ್ಛತೆ ಮತ್ತು ವಿವಿಧ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.
ಬಂಟ್ವಾಳದ ಉನ್ನತಿ ಸೌಧದಲ್ಲಿ ಗಾಂಧಿ ಜಯಂತಿ :
ಬಂಟ್ವಾಳದ ಉನ್ನತಿ ಸೌಧದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸಮಿತಿ, ಶ್ರೀ.ಕ್ಷೇ.ಧ.ಗ್ರಾ.ಯೋ, ಬಿ.ಸಿ.ಟ್ರಸ್ಟ್ ಬಂಟ್ವಾಳ, ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೇಂದ್ರ ಉಜಿರೆ, ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಆಶ್ರಯದಲ್ಲಿ ಗಾಂಧಿ ಜಯಂತಿ ನಿಮಿತ್ತ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು. ಸಮಾಜದಲ್ಲಿ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಬೆಳಕು ನೀಡುವ ಕಾರ್ಯ ಜನಜಾಗೃತಿ ವೇದಿಕೆ ಮೂಲಕ ಆಗಿದೆ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ , ಫಲಾನುಭವಿಗಳಿಗೆ ವೀಲ್ ಚೇರ್, ಅನಾರೋಗ್ಯ ಪೀಡಿತರಿಗೆ ವಾಟರ್ ಬೆಡ್, ವಿವಿಧ ಸಲಕರಣೆ ಹಾಗೂ ಸಹಾಯಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನವ ಜೀವನ ಟ್ರಸ್ಟ್ ಸದಸ್ಯರಿಗೆ ಮಾಸ್ಕ್ , ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.
ಬಿಜೆಪಿ ನಗರ ಮಂಡಲ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ :
ದೇಶದ ಜೀವಾಳವಾಗಿರುವ ಕೃಷಿಕರ ಬಗ್ಗೆ ಕಾಳಜಿ ಹೊಂದುವುದು ಮತ್ತು ಸ್ವಚ್ಛ ಭಾರತದ ಕನಸನ್ನು ನನಸಾಗಿಸುವುದು ನಿಜವಾದ ಗಾಂಧಿ ಜಯಂತಿ ಆಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ಬಿಜೆಪಿ ನಗರ ಮಂಡಲದಿಂದ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಸ್ವಚ್ಛತೆಯಲ್ಲಿ ಪುತ್ತೂರು ನಗರಸಭೆ ರಾಜ್ಯ ಮಟ್ಟದಲ್ಲಿ 30ನೇ ಸ್ಥಾನದಿಂದ 6 ನೇ ಸ್ಥಾನಕ್ಕೆ ಬಂದಿದೆ. ಮುಂದಿನ ಗಾಂಧಿ ಜಯಂತಿಯ ಸಂದರ್ಭ ಪುತ್ತೂರು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಬೇಕು ಎಂದರು.
ಪುತ್ತೂರು ತಾಲೂಕು ಮಟ್ಟದ ಗಾಂಧಿ ಜಯಂತಿ :
ಪುತ್ತೂರು ತಾಲೂಕು ಮಟ್ಟದ ಗಾಂಧಿ ಜಯಂತಿ ನಗರದ ಮಿನಿ ವಿಧಾನಸೌಧದ ತಾಲೂಕು ಕಚೇರಿ ಸಂಭಾಗಣದಲ್ಲಿ ನಡೆಯಿತು. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಎಸ್ಪಿ ಲಖನ್ ಸಿಂಗ್, ತಹಶೀಲ್ದಾರ್ ರಮೇಶ್ ಬಾಬು ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಪ್ರಯುಕ್ತ ಆರೋಗ್ಯ ಜಾಗೃತಿ :
ಗಾಂಧಿ ಜಯಂತಿ ಪ್ರಯುಕ್ತ ಪುತ್ತೂರು ನಗರ ಸಭೆ ಸ್ವಚ್ಛ ಭಾರತ ಅಭಿಯಾನದ 6 ನೇ ವಾರ್ಷಿಕೋತ್ಸವದ ನಿಮಿತ್ತ, ನಗರಸಭೆಯ ಎಲ್ಲ ವಾರ್ಡ್ಗಳಲ್ಲಿ ನಗರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಆರೋಗ್ಯ ಜಾಗೃತಿ ಜಾಥಾ ನಡೆಸಿದರು. ಶಾಸಕ ಸಂಜೀವ ಮಠಂದೂರು ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಸಹಾಯ ಆಯುಕ್ತ ಡಾ. ಯತೀಶ್ ಉಳ್ಳಾಲ್, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತಿತರ ಗಣ್ಯರು ಇದ್ದರು.
ಕೊಂಕಣ ರೈಲ್ವೆಯಿಂದ ಸ್ವಚ್ಛತಾ ಕಾರ್ಯಕ್ರಮ :
ಗಾಂಧಿ ಜಯಂತಿ ಪ್ರಯುಕ್ತ ಮಂಗಳೂರಿನ ಸುರತ್ಕಲ್ನಲ್ಲಿ ಕೊಂಕಣ್ ರೈಲ್ವೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ರೈಲ್ವೆ ಸಿಬ್ಬಂದಿ, ನೀರಿನ ಸ್ವಚ್ಛತೆ ಪರೀಕ್ಷೆ, ನೀರಿನ ಪೈಪ್ಗಳ ಶುಚಿ, ರೈಲಿನ ಒಳ ಹಾಗೂ ಹೊರ ಮೈ, ಶೌಚಾಲಯ ಮತ್ತು ರೈಲ್ವೆ ನಿಲ್ದಾಣದ ಪರಿಸರವನ್ನು ಸ್ವಚ್ಚಗೊಳಿಸಿದರು.
ಪುತ್ತೂರು ಗಾಂಧಿ ಕಟ್ಟೆಯಲ್ಲಿ ಗಾಂಧಿ ಜಯಂತಿ :
ಪುತ್ತೂರು ಗಾಂಧಿ ಕಟ್ಟೆ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ, ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ನಗರದ ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.