ಮಂಗಳೂರು: ಕೇರಳದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ಗೆ ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ರಮಾನಾಥ ರೈ, ಇದು ಸಹಿಸುವುದು ಅಸಾಧ್ಯ. ಇದರ ವಿರುದ್ಧ ಸೆಟೆದು ನಿಲ್ಲಬೇಕಾದ ಅವಶ್ಯಕತೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದ ವರ್ಗಗಳ ಜನರ ಧಾರ್ಮಿಕ ಹಸಿವು ನೀಗಿಸಿ, ಒಂದು ಕಾಲದಲ್ಲಿ ಅಸ್ಪೃಶ್ಯತೆಗೆ ಒಳಗಾಗಿರುವ ಜನಸಮುದಾಯಕ್ಕೆ ಸ್ವಾಭಿಮಾನದ ಬದುಕು ಕೊಟ್ಟಿರುವ ಓರ್ವ ದಾರ್ಶನಿಕ. ಈ ಮೂಲಕ ಕೇಂದ್ರ ಸರ್ಕಾರ ನಾರಾಯಣ ಗುರುಗಳ ಸಿದ್ಧಾಂತಕ್ಕೆ ಅಪಚಾರ ಎಸಗಿದೆ. ಅಲ್ಲದೇ ಹಿಂದುಳಿದ ವರ್ಗಗಳ ಸಮಾಜಕ್ಕೂ ನೋವುಂಟು ಮಾಡಿದೆ ಎಂದರು.
ಇದಕ್ಕೆ ಬೇರೆ ಬೇರೆ ರೀತಿಯ ಸಬೂಬು ಹೇಳಬಹುದು. ಆದರೆ, ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನೇರವಾಗಿ ಅಪಮಾನ ಮಾಡಿರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಕಾಂಗ್ರೆಸ್ ಈ ಕೃತ್ಯವನ್ನು ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೆ ನಿರ್ದಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಿದ್ದೇವೆ. ಕಾಂಗ್ರೆಸ್ ಪಕ್ಷ ಇದಕ್ಕೊಂದು ಹೋರಾಟದ ರೂಪುರೇಷೆಗಳನ್ನು ಮಾಡುವಂತಹ ಕೆಲಸ ಮಾಡುತ್ತದೆ ಎಂದು ರಮಾನಾಥ ರೈ ಹೇಳಿದರು.
ಇದನ್ನೂ ಓದಿ: ಗ್ಯಾಸ್ ಗೀಸರ್ ತಂದ ಆಪತ್ತು.. ಅನಿಲ ಸೋರಿಕೆಯಿಂದ ಬೆಂಗಳೂರಲ್ಲಿ ತಾಯಿ-ಮಗಳು ಉಸಿರುಗಟ್ಟಿ ಸಾವು